ಮಂಗಳೂರು, ಜೂ18(Daijiworld News/SS): ವಾಯು ಚಂಡ ಮಾರುತ ಪ್ರಭಾವದಿಂದ ಕರಾವಳಿಯಲ್ಲಿ ಮುಂಗಾರು ದುರ್ಬಲವಾಗಿದೆ. ಜೂನ್ 8 ರಂದೇ ಮುಂಗಾರು ಕೇರಳ ಪ್ರವೇಶಿಸಿದರೂ ಕರ್ನಾಟಕ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಒಂದೆರೆಡು ದಿನ ಸ್ವಲ್ಪ ಮಳೆಯಾಗಿತ್ತು. ಆದರೆ ಕರಾವಳಿಯಲ್ಲಿ ಸದ್ಯ ಮತ್ತೆ ಸೆಕೆ ಹೆಚ್ಚಾಗಿದೆ.
ಜೂನ್ ಎಂದರೆ ಕರಾವಳಿಯಲ್ಲಿ ಮಳೆಯ ಆರಂಭ ಕಾಲ. ನೆತ್ತಿ ಸುಡುವ ಬಿಸಿಲಿಗೆ ಮೋಡಗಳ ತೆರೆ ಹಾಕಿ ಮಳೆಯ ಸಿಂಚನ ಮಾಡಿ ಬಾಯ್ತೆರೆದು ನಿಂತ ಭೂಮಿ, ಉಷ್ಣದಿಂದ ಕಂಗೆಟ್ಟ ಪ್ರಾಣಿ, ಪಕ್ಷಿ, ಮಾನವನಿಗೆ ತಂಪೆರೆಯುವ ಸಮಯ. ಈ ಕ್ಷಣವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಕರಾವಳಿಯ ಜನರು ಎದುರು ನೋಡುತ್ತಿರುತ್ತಾರೆ. ಆದರೆ, ವರುಣ ಮಾತ್ರ ಅದ್ಯಾಕೋ ಇನ್ನೂ ಮನಸ್ಸು ಮಾಡಿಲ್ಲ. ಇನ್ನೂ ಭೂಮಿಯನ್ನು ತಣಿಸಿಲ್ಲ.
ದಕ್ಷಿಣ ಕನ್ನಡ ಸೇರಿದಂತೆ ಕೆಲವೆಡೆ ಮುಂಗಾರು ಪ್ರವೇಶಿಸಿದರೂ ಆರಂಭದಲ್ಲೇ ದುರ್ಬಲಗೊಂಡು ದಿನಕ್ಕೆ ಒಂದೆರಡು ಬಾರಿ ಮಳೆಯಾಗುತ್ತಿದೆ. ಮಂಗಳೂರಿನಲ್ಲಿ ಜೂ. 16ರಿಂದಲೇ ಬಿಸಿಲಿನ ವಾತಾವರಣ ನೆಲೆಸಿ ಆಗೊಮ್ಮೆ ಈಗೊಮ್ಮೆ ಮಾತ್ರ ಮಳೆ ಸುರಿಯುತ್ತಿದೆ. ಅರಬ್ಬೀ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗಿರುದನ್ನು ಹೊರತುಪಡಿಸಿದರೆ ಮಳೆಯ ಸದ್ದು ಇಲ್ಲ. ಚಂಡಮಾರುತ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮತ್ತೆ ಸೆಕೆ ಶುರುವಾಗಿದೆ.
ಈ ಬಾರಿ ವಿಳಂಬವಾಗಿ ಮುಂಗಾರು ರಾಜ್ಯ ಪ್ರವೇಶಿಸಿದೆ. ಇಷ್ಟೊಂದು ತಡವಾಗಿ ಮುಂಗಾರು ಪ್ರವೇಶಿಸಿದ್ದು ತೀರಾ ಕಡಿಮೆ. ಕಳೆದ ವರ್ಷ ಜೂನ್ 9ಕ್ಕೆ ಪ್ರವೇಶಿಸಿದ್ದ ಮುಂಗಾರು ಜೂನ್ 14ರ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಮಳೆ ಕಣ್ಣಾಮುಚ್ಚಾಲೆಯಾಟವಾಡುತ್ತಿದೆ.
ಈ ನಡುವೆ ಜೂನ್ 21ರ ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.