ಉಡುಪಿ, ಜೂ18(Daijiworld News/SS): ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳರನ್ನು (66) ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅರೇಂಗಡಿ-ಚಂದಾವರ ನಡುವಿನ ಕಡತೋಕ ಕ್ರಾಸ್ನಲ್ಲಿ ಜೂ.17ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಶ್ರೀಪಾದ ಹೆಗಡೆ ಹಡಿನಬಾಳ ಅವರಿಗೆ ಮುಂದಿನ 6 ರಿಂದ 12 ಗಂಟೆಗಳ ಕಾಲ ತುರ್ತು ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಸುವಂತೆ ವೈದ್ಯರು ಸಲಹೆ ಕೊಟ್ಟಿದ್ದು, ಬಳಿಕ ಶಸ್ತ್ರ ಚಿಕಿತ್ಸೆ ನಡೆಸುವ ಬಗ್ಗೆ ನಿರ್ಧರಿಸುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಪುತ್ರ ಶ್ರೀಶ ಹೆಗಡೆ ಅವರೊಂದಿಗೆ ಕುಮಟಾ ಸಮೀಪದ ದಿವಗಿ ಮಠಕ್ಕೆ ಜೂ17ರಂದು ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಕಡತೋಕ ಸಮೀಪ ಆಟೋರಿಕ್ಷಾ ಚಾಲಕ ಅಡ್ಡ ರಸ್ತೆಯಿಂದ ನೇರವಾಗಿ ಮುಖ್ಯರಸ್ತೆಗೆ ನುಗ್ಗಿಸಿದ ಪರಿಣಾಮ ಬೈಕ್ಗೆ ರಿಕ್ಷಾ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪುತ್ರ ಶ್ರೀಶ ರಿಕ್ಷಾದ ಮುಂಭಾಗಕ್ಕೆ ಬಿದ್ದರೆ, ಶ್ರೀಪಾದ ಹೆಗಡೆ ರಸ್ತೆಗೆ ಅಪ್ಪಳಿಸಿ, ಗಂಭೀರ ಗಾಯಗೊಂಡಿದ್ದಾರೆ.