ಉಡುಪಿ, ಜೂ 18 (Daijiworld News/MSP): ಐಎಎಂ ಗೋಲ್ಡ್ ಕಂಪನಿ ಮಾಲೀಕ ಮನ್ಸೂರ್ ಖಾನ್ ದೋಖಾ ಪ್ರಕರಣ ಹೊರ ಬರುತ್ತಿದ್ದಂತೆ ದಿನಕ್ಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಸಲಿಗೆ ಐಎಂಎ ಕಂಪನಿಯ ಮನ್ಸೂರ್ ಟಾರ್ಗೆಟ್ ಮಾಡಿದ್ದು ತನ್ನ ಸಮುದಾಯವರನ್ನೇ ಅನ್ನೋದು ಕುತೂಹಲಕಾರಿಯಾದ ಸಂಗತಿಯಾಗಿದೆ.
ಇದೀಗ ರಾಜ್ಯಾದ್ಯಾಂತ, ಇತನ ವಿರುದ್ದ ದೂರುಗಳು ದಾಖಲಾಗುತ್ತಿದೆ. ಉಡುಪಿಯ ಮಹಿಳೆಯೂ ಇತನ ವಂಚನೆಯ ಜಾಲಕ್ಕೆ ತುತ್ತಾಗಿದ್ದು, IMA ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ ವಿರುದ್ದ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದಾರೆ.
IMA ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ. ಬೆಂಗಳೂರು ಇದರಲ್ಲಿ ಹೂಡಿಕೆ ಮಾಡಿದ್ರೆ, ಅಸಲು ಮೊತ್ತದ ಜೊತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ಸಿಗುತ್ತದೆ ಎಂದು ತಿಳಿದ ಗುಜ್ಜರ್ ಬೆಟ್ಟು ನಿವಾಸಿ ಎಸ್.ಕೆ. ನಾಹಿದಾ (30) ಎಂಬವರು, ೫೧ ಸಾವಿರವನ್ನು ಹೂಡಿಕೆ ಮಾಡಿದ್ದರು. 2018ರ ಡಿಸೆಂಬರ್ ರಲ್ಲಿ ಪಾಲು ಬಂಡವಾಳದ 1000 ರೂಪಾಯಿ ಹಾಗೂ ಡೆಪೋಸಿಟ್ ಆಗಿ ರೂಪಾಯಿ 30,000 ರೂಪಾಯಿ ಮತ್ತು 20,000 ರೂಪಾಯಿಯನ್ನು ನೆಫ್ಟ್ ಮುಖಾಂತರ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ್ದರ ಷೇರ್ ಸರ್ಟಿಫಿಕೇಟ್ ಮತ್ತು ಪಾಸ್ ಬುಕ್ ವರಿಗೆ ಅಂಚೆ ಮುಖೇನ ತಲುಪಿದೆ. ಮಾತ್ರವಲ್ಲದೆ ಹೂಡಿಕೆಯ ಲಾಭಾಂಶವಾಗಿ ಜನವರಿಯಲ್ಲಿ 1,250 ಹಾಗೂ ಫೆಬ್ರವರಿಯಲ್ಲಿ 1,278 ರೂಪಾಯಿ ಜಮೆ ಆಗಿರುತ್ತದೆ. ಆ ಬಳಿಕ ತಮಗಾಗಿರುವುದು ವಂಚನೆ ಎಂದು ತಿಳಿಯುವಷ್ಟರಲ್ಲಿ ಮನ್ಸೂರ್ ಖಾನ್ ಮೋಸದ ಜಾಲ ಬಯಲಾಗಿದೆ.
ಇದೀಗ ಎಸ್.ಕೆ. ನಾಹಿದಾ ಅವರು IMA ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ. ಬೆಂಗಳೂರು ಇದರ ಸಿ.ಇ.ಓ ಮನ್ಸೂರ್ ಖಾನ್ ಹಾಗೂ ಇದರ ನಿರ್ದೇಶಕರ ವಿರುದ್ದ ಬಡ್ಡಿ ಅಥವಾ ಲಾಭಾಂಶ ನೀಡದೇ ಮತ್ತು ಅಸಲು ಹೂಡಿಕೆಯ ಹಣ ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ದೂರು ನೀಡಿದ್ದಾರೆ.