ಕಾರ್ಕಳ, ಏ.26(DaijiworldNews/TA): 2024ರ ಸಾಲಿನ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಕಾರ್ಕಳ ಸಾಲ್ಮರದ ಶೌಖತ್ ಅಝೀಮ್ 345ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಕನಸು ನನಸಾಗಿಸಿಕೊಂಡಿದ್ದಾರೆ.

ಛಲಬಿಡದ ತ್ರಿವಿಕ್ರಮನಂತೆ ಸತತ ಒಂಬತ್ತನೆ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದ ಇವರು ಕೊನೆಯ ಯತ್ನದಲ್ಲಿ ಉತ್ತಮ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಇವರು ಕಾರ್ಕಳ ಸಾಲ್ಮರದ ಶೇಖ್ ಅಬ್ದುಲ್ಲಾ, ಮೈಮುನ ದಂಪತಿಯ ಪುತ್ರ. ತಂದೆ ಶೇಖ್ ಅಬ್ದುಲ್ಲಾ ಅವರು ಟ್ರಕ್ ಚಾಲಕರಾಗಿ ಜೀವನ ರೂಪಿಸಿಕೊಂಡವರು.
ಸಾಮಾನ್ಯ ಕುಟುಂಬದಿಂದ ಬಂದ ಶೌಕತ್ ಅಝೀಮ್ ಬಾಲ್ಯದಲ್ಲಿರುವಾಗ ಪುನಿತ್ ರಾಜ್ ಕುಮಾರ್ ಅಭಿನಯದ ಪೃಥ್ವಿ ಸಿನಿಮ ನೋಡಿ ಐಎಎಸ್ ಕನಸು ಕಂಡಿದ್ದರು. ಕಾರ್ಕಳ ಸರಕಾರಿ ಉರ್ದು ಶಾಲೆ, ಶ್ರೀಮದ್ ಭುವನೇಂದ್ರ ಶಾಲೆ, ಕುಕ್ಕುಂದೂರು ಕೆಇಎಂಎಸ್ ಕಾಲೇಜು, ಮೂಡುಬಿದಿರೆ ಎಂಜಿನಿಯರಿಂಗ್ ಶಿಕ್ಷಣ(MITE) ಪಡೆದಿದ್ದಾರೆ.
2022ರ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಅವರು ರಕ್ಷಣಾ ಇಲಾಖೆಯ ಅಕೌಂಟಿಂಗ್ ಘಟಕಕ್ಕೆ ಆಯ್ಕೆಯಾಗಿ ಸದ್ಯಕ್ಕೆ ಪುಣೆ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮರಳಿ ಯತ್ನವ ಮಾಡು ಎಂಬಂತೆ ಕೊನೆಯ ಪ್ರಯತ್ನದಲ್ಲಿ ಐಎಎಸ್ ಗುರಿ ತಲುಪಿದ್ದಾರೆ.