ಉಡುಪಿ, ಜೂ 18 (Daijiworld News/SM): ಮಣಿಪಾಲದ ಮಂಚಿಕೆರೆ ಪ್ರದೇಶದಲ್ಲಿ ನೆಲ ಬಿರುಕುಬಿಟ್ಟಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಇದು ಗುಡ್ಡೆ ಪ್ರದೇಶವಾಗಿದ್ದು, ಕೆಳಗಿನ ಭಾಗದಲ್ಲಿರುವ ಜನತೆಗೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ.
ಇನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಪ್ರದೇಶದಲ್ಲಿರುವ ಗುಡ್ಡ ಬಿರುಕು ಬಿಟ್ಟಿತ್ತು. ವರ್ಷಗಳ ಹಿಂದೆ 2 ಇಂಚುಗಳಷ್ಟು ಬಿರುಕು ಬಿಟ್ಟಿದ್ದ ಭೂಮಿ ಇದೀಗ ಮತ್ತಷ್ಟು ಬಿರುಕು ಬಿಟ್ಟಿದ್ದು, ಸುಮಾರು 9 ಇಂಚಿನಷ್ಟು ಬಿರುಕುಬಿಟ್ಟಿದೆ. ಇದರಿಂದ ಈ ಪ್ರದೇಶದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಒಂದೊಮ್ಮೆ ಪುಟಾಣಿ ಮಕ್ಕಳು ಈ ಪ್ರದೇಶದಲ್ಲಿ ಓಡಾಡಿದರೆ, ಕತ್ತಲಲ್ಲಿ ನಡೆದಾಡಿದರೆ ಅಪಾಯವಂತು ತಪ್ಪಿದ್ದಲ್ಲ.
ಇನ್ನು ಈ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮನೆಯೊಂದು ಬಿರುಕು ಬಿಟ್ಟಿದೆ. ಮನೆಯ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ದಿನದಿಂದ ದಿನಕ್ಕೆ ಬಿರುಕು ಹೆಚ್ಚಾಗುತ್ತದೆ ಎಂದು ಮನೆ ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರದೇಶದ ಅಲ್ಪ ದೂರದಲ್ಲಿ ಕೆಲವು ಮನೆಗಳಿದ್ದು ಬಿರುಕು ಮುಂದುವರಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಮಳೆ ಜೋರಾಗಿ ಸುರಿದಲ್ಲಿ ಮತ್ತಷ್ಟು ಬಿರುಕು ಬಿಡುವ ಸಾಧ್ಯತೆ ಇದೆ. ಹಾಗಾಗಿ ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಕಳೆದ ಬಾರಿಯೂ ಈ ಸ್ಥಳದಲ್ಲಿ ಭೂಮಿ ಬಿರುಕುಬಿಟ್ಟಿದ್ದು ಬಳಿಕ ಆ ಸ್ಥಳದಲ್ಲಿ ನೀರಿನ ಒರತೆ ಕಂಡುಬಂದಿತ್ತು ಎನ್ನಲಾಗಿದೆ.