ಮಂಗಳೂರು, ಡಿ 06 : ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಡಿ 6 ಕ್ಕೆ 25 ವರ್ಷ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆ ಹಾಗು ವಿವಿಧ ಸಂಘಟನೆಗಳು ಹಮ್ಮಿಕೊಳ್ಳುವ ವಿಜಯೋತ್ಸವ ಆಚರಣೆಗೆ ಸಂಬಂಧಿಸಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿರ್ಬಂಧಕಾಜ್ಞೆ ಹೊರಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮತ್ತು ಮಂಗಳೂರು ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಅವರು ಈ ನಿರ್ಬಂಧಕಾಜ್ಞೆ ಆದೇಶ ಹೊರಡಿಸಿದ್ದಾರೆ. ಅದರಂತೆ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಸಾರ್ವಜನಿಕ, ಧಾರ್ಮಿಕ, ರಾಜಕೀಯ ಬಹಿರಂಗ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತೆ ತಡೆಗಳಿಗೆ ಅವಕಾಶ ಇಲ್ಲ ಎಂದು ಆದೇಶ ಹೊರಡಿಸಲಾಗಿದೆ.ಇನ್ನು ಆಯೋಧ್ಯಾ ಘಟನೆಯ ದಿನಾಚರಣೆ ಹಿನ್ನಲೆಯಲ್ಲಿ ಮಂಜೇಶ್ವರ ದ ಹಲವಡೆ ಬಸ್ಸು ಮತ್ತು ವಾಹನಗಳಿಗೆ ಕಲ್ಲೆಸೆಯಲಾಗಿದೆ. ಡಿ 5 ರ ಮಂಗಳವಾರ ರಾತ್ರಿ ತಲಪ್ಪಾಡಿಯಿಂದ ಹೊಸಂಗಡಿ ಮೂಲಕ ಆಣೆಕಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಮೊರತ್ತಣೆ ಬಳಿ ಕಲ್ಲೆಸೆಯಲಾಗಿದೆ. ಉಪ್ಪಳ ನಯಾಬಜಾರ್ ನಲ್ಲಿ ವಾಹನಗಳ ಮೇಲೆ ಕಲ್ಲೆಸೆದ ಘಟನೆ ನಡೆದಿದೆ. ಘಟನೆ ಹಿನ್ನಲೆಯಲ್ಲಿ ಮಂಜೇಶ್ವರ ಮತ್ತು ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಿಗು ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.