ಉಡುಪಿ, ಜೂ 18 (Daijiworld News/SM): ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ನಿರ್ಧರಿಸಿ ಈಗಾಗಲೇ ವಾಸ್ತವ್ಯವನ್ನು ಆರಂಭಿಸಿದ್ದಾರೆ. ಪ್ರತಿ ಪಕ್ಷಗಳು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಇದೀಗ ಸಿಎಂ ಕುಮಾರಸ್ವಾಮಿ ಉಡುಪಿಯಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕೆನ್ನುವ ಆಗ್ರಹ ಕೇಳಿ ಬಂದಿದೆ.
ಈ ಆಗ್ರಹ ಮಾಡಿರುವುದು ಆಡಳಿತ ಪಕ್ಷದವರಲ್ಲಿ ಬದಲಿಗೆ ಪ್ರತಿಪಕ್ಷ ಬಿಜೆಪಿಯವರು. ಉಡುಪಿ ಶಾಸಕ ರಘುಪತಿ ಭಟ್ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದು, ಉಡುಪಿಯಲ್ಲಿ ಗ್ರಾಮ ವಾಸ್ತವ್ಯ ನಡೆಸುವಂತೆ ಆಗ್ರಹಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿರುವ ಹಾಗೂ ಪರಿಶಿಷ್ಟ ಜಾತಿ, ಪಂಗಡದವರು ವಾಸವಾಗಿರುವ ಕರ್ಜೆ ಗ್ರಾಮದ ಹೊಸೂರು ಸರಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಮರಳಿನ ಸಮಸ್ಯೆ ತೀವ್ರಗೊಂಡಿದ್ದು, ಇದಕ್ಕೆ ಪರಿಹಾರ ನೀಡುವ ಅಗತ್ಯವಿದೆ. ಮರಳಿನ ಸಮಸ್ಯೆಯಿಂದಾಗಿ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿವೆ. ಇನ್ನು ಮುಂಗಾರಿನ ಸಮಸ್ಯೆಯಿಂದ ಕುಡಿಯುವ ನೀರು, ಕೃಷಿಗೆ ನೀರಿನ ಸಮಸ್ಯೆಯುಂಟಾಗಿದೆ. ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದವರಿಗೆ ಹಕ್ಕು ಪತ್ರ ವಿತರಿಸುವಲ್ಲಿ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಹತ್ತು ಹಲವು ಸಮಸ್ಯೆಗಳಿದ್ದು, ಗ್ರಾಮ ವಾಸ್ತವ್ಯದ ಮೂಲಕ ಪರಿಹರಿಸುವಂತೆ ಮನವಿ ಮಾಡಿದ್ದಾರೆ.