ಮಂಗಳೂರು, ಮೇ. 03 (DaijiworldNews/TA): ರಾಜ್ಯ ಸರ್ಕಾರವು ಸದ್ಯ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಯುತ್ತಿಲ್ಲ. ಬದಲಾಗಿ ಏಕಮುಖ ರೀತಿಯಲ್ಲಿ ನಡೆಯುತ್ತಿದೆ. ಕೇವಲ ಒಂದು ವರ್ಗವನ್ನು ಸಂತೃಪ್ತಿ ಮಾಡುವ ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ದಿ, ಕಾನೂನು ಸುವ್ಯವಸ್ಥೆಯನ್ನು ಕೇವಲ ಒಂದು ಕಡೆಯಲ್ಲಿ ಮಾತ್ರ ನಡೆಸಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ರಾಜ್ಯ ಗೃಹ ಹಾಗೂ ಉಸ್ತುವಾರಿ ಸಚಿವರು ನಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅನುಭವಿ ಶಾಸಕರಿದ್ದು, ಅವರಿಗೆ ಜಿಲ್ಲೆಯ ಎಲ್ಲಾ ಆಗುಹೋಗುಗಳ ಕುರಿತಾದ ಮಾಹಿತಿ ಇದೆ. ಆದರೆ ಅವರೊಂದಿಗೆ ಗೃಹ ಹಾಗೂ ಉಸ್ತುವಾರಿ ಸಚಿವರು ಚರ್ಚೆ ನಡೆಸಿ, ಒಳ್ಳೆಯ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ನಾವು ವಿಶ್ವಾಸ ಹೊಂದಿದ್ದೆವು. ಆದರೆ ಜನಪ್ರತಿನಿಧಿಗಳನ್ನು ಬಿಟ್ಟು ಒಂದು ಸಮುದಾಯದ ಜೊತೆ ಮಾತ್ರ ಸಭೆ ನಡೆಸಿರುವುದು ಜಿಲ್ಲೆ ಹಾಗೂ ರಾಜ್ಯದ ಆಡಳಿತ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಅವಶ್ಯಕತೆ ಇತ್ತು. ಗೃಹ ಸಚಿವರು anti ಕಮ್ಯೂನಲ್ ಫೋರ್ಸ್ ಮಾಡುವ ಬಗ್ಗೆ ತಿಳಿಸಿದ್ದಾರೆ. ಆದರೆ ಇದೊಂದು ಹಿಂದೂ ಆಂಟಿ ಫೋರ್ಸ್ ಎಂದು ನಮಗೆ ಅನಿಸುತ್ತಿದೆ. ಹಿಂದೂ ಯುವಕರ ಮೇಲೆ ನಿರಂತರ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.