ಬಂಟ್ವಾಳ, ಮೇ. 04 (DaijiworldNews/TA): ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ದುಷ್ಕರ್ಮಿಗಳಿಂದ ಬಲಿಯಾದ ಸುಹಾಸ್ ಶೆಟ್ಟಿಯ ಬಂಟ್ವಾಳದ ಕಾರಿಂಜದಲ್ಲಿರುವ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.



ತೀವ್ರ ನೋವು ಹಾಗೂ ಆಕ್ರೋಶ ವ್ಯಕ್ತಪಡಿಸಿರುವ ಚೌಟ ಅವರು, ಸುಹಾಸ್ ಶೆಟ್ಟಿಯ ತಂದೆ-ತಾಯಿ ಹಾಗೂ ಕುಟುಂಬಸ್ಥರ ಜತೆಗೆ ಘಟನೆಗೆ ಸಂಬಂಧಿಸಿದಂತೆ ಮಾತನಾಡಿ ಮಾಹಿತಿ ಪಡೆದುಕೊಂಡರು. ಮಗನನ್ನು ಕಳೆದುಕೊಂಡು ತೀವ್ರ ನೋವಿನಲ್ಲಿರುವ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸುವುದಕ್ಕೆ ಎಲ್ಲ ರೀತಿಯ ಸಹಾಯ, ಬೆಂಬಲ ನೀಡಲಾಗುವುದು. ಮನೆಗೆ ಆಧಾರಸ್ತಂಭವಾಗಿದ್ದ ಸುಹಾಸ್ ಸಾವಿನಿಂದ ಅವರ ಕುಟುಂಬ ದಿಕ್ಕು ತೋಚದ ಸ್ಥಿತಿಯಲ್ಲಿದೆ.
ತಾಯಿ ಕೂಡ ಅನಾರೋಗಕ್ಕೆ ಒಳಗಾಗಿದ್ದು, ಸೂಕ್ತ ಆರ್ಥಿಕ ಬೆಂಬಲದ ಅಗತ್ಯವಿದೆ. ಹೀಗಿರುವಾಗ, ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರವನ್ನು ನೀಡಬೇಕು. ಅಲ್ಲದೆ, ಈ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒತ್ತಡ ಹೇರುವ ಮೂಲಕ ಸುಹಾಸ್ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಟ್ಟದಲ್ಲಿಯೂ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಸಂಸದರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.