ಕುಂದಾಪುರ ಡಿ 6 : ಪ್ರಕರಣವೊಂದರ ಇತ್ಯರ್ಥಕ್ಕೆಂದು ಪೊಲೀಸ್ ಠಾಣೆಗೆ ಬಂದು ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಎರಡು ತಂಡಗಳು ಬಳಿಕ ಠಾಣೆಯಲ್ಲೇ ಹೊಡೆದಾಡಿಕೊಂಡ ಘಟನೆ ಡಿ 5 ರ ಮಂಗಳವಾರ ರಾತ್ರಿ ನಡೆದಿದೆ.ಘಟನೆಗೆ ಸಂಬಂಧಿಸಿದಂತೆ ಇಬ್ಬರು ಗಾಯಗೊಂಡಿದ್ದು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ
ಮಂಗಳವಾರ ಕೋಟ ಗ್ರಾಮ ಪಂಚಾಯತ್ನಲ್ಲಿ ದಲಿತರ ಕಾನೂನು ಮಾಹಿತಿ ಶಿಬಿರ ಮತ್ತು ಸವಲತ್ತು ವಿತರಣೆ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಿಡಿಓ ಮತ್ತು ಕಾರ್ಯದರ್ಶಿ ಗೈರಾಗಿರುವ ಹಿನ್ನೆಲೆ ಸಭೆಯನ್ನ ರದ್ದುಗೊಳಿಸಬೇಕೆಂದು ಕೆಲ ದಲಿತ ಸಂಘಟನೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪೂರ್ವನಿಗದಿತ ಕಾರ್ಯಕ್ರಮ ಇದಕ್ಕೆ ಪಿಡಿಓ ಮತ್ತು ಕಾರ್ಯದರ್ಶಿ ಇಲ್ಲವೆಂಬ ಕಾರಣಕ್ಕೆ ಮುಂದೂಡಲು ಸಾಧ್ಯವಿಲ್ಲ ಎಂಬ ಉತ್ತರವನ್ನ ಪಂಚಾಯತ್ ಸದಸ್ಯರು ನೀಡಿ ಕಾರ್ಯಕ್ರಮವನ್ನ ಆರಂಭಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾನೂನು ಮಾಹಿತಿ ನೀಡಲೆಂದು ಬಂದ ವಕೀಲ ಟಿ. ಮಂಜುನಾಥ್ ಗಿಳಿಯಾರು ಕಾನೂನು ಮಾಹಿತಿ ನೀಡುವ ಸಂದರ್ಭ ಕಾನೂನಿನ ಹಿನ್ನೆಲೆಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಸಂದರ್ಭ ದಲಿತ ಸಂಘಟನೆಯೊಂದರ ಮುಖಂಡ ಶ್ಯಾಮ್ ಎಂಬಾತ ಸೆಕ್ಷನ್ಗಳ ಬಗ್ಗೆ ಮಾತ್ರ ಮಾಹಿತಿ ನೀಡಿ , ಬೇರೆ ವಿಚಾರ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು. ಹೀಗೆ ಹಲವು ಬಾರಿ ಸಭೆಯಲ್ಲಿ ತಡೆ ನೀಡುತ್ತಿದ್ದ ಹಿನ್ನೆಲೆ ಸಂಪನ್ಮೂಲ ವ್ಯಕ್ತಿ ಟಿ.ಮಂಜುನಾಥ್ ಮತ್ತು ದಲಿತ ಮುಖಂಡ ಶ್ಯಾಮ್ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸಂಘಟನೆಯ ಕೆಲ ಸದಸ್ಯರು ಸಭೆಯ ಬಳಿ ಬಂದು ಗಲಾಟೆ ನಡೆಸಿದರು. ನಂತರ ನೋಡೆಲ್ ಅಧಿಕಾರಿ ಅರುಣ್ ಸಮಾಧಾನಿಸಿ ಕಾರ್ಯಕ್ರಮ ಮುಂದುವರಿಯುವಂತೆ ಮಾಡಿದರು.
ಠಾಣೆ ಮೆಟ್ಟಿಲೇರಿದ ಪ್ರಕರಣ
ಈ ಸಂದರ್ಭ ಕೋಟ ಠಾಣೆ ಮೆಟ್ಟಿಲೇರಿದ ಈ ಪ್ರಕರಣ ಅಧ್ಯಕ್ಷರು ಗಲಾಟೆ ನಡೆದ ಸಂದರ್ಭ ನಮ್ಮನ್ನ ನೋಡಿ ನಗುತ್ತಿದ್ದರು ಎಂದು ಆರೋಪಿಸಿ ಆರತಿ, ಶ್ಯಾಮ್, ವಿಜಯ್ ಮೊದಲಾದವರು ದೂರು ನೀಡಿದ್ದು, ಘಟನೆ ಕುರಿತು ಕ್ಷಮಾಪಣೆ ಕೇಳಬೇಕು ಇಲ್ಲವಾದಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಹೇಳಿದರು. ನಂತರ ಠಾಣೆಗೆ ಆಗಮಿಸಿದ ಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್, ಪಂಚಾಯತ್ ಸದಸ್ಯರು ಮತ್ತು ಟಿ ಮಂಜುನಾಥ್ ನೇತೃತ್ವದ ದಲಿತ ಸಂಘಟನೆ ಸದಸ್ಯರು ಮಾತುಕತೆ ನಡೆಸಿದರು. ನಂತರ ಎಲ್ಲರ ಸಮ್ಮುಖದಲ್ಲಿ ಕ್ಷಮಾಪಣೆಯನ್ನ ಪಂಚಾಯತ್ ಅಧ್ಯಕ್ಷರು ಕೇಳಿದರು. ಅಧ್ಯಕ್ಷರು ಕ್ಷಮಾಪಣೆ ಕೇಳಿರುವುದನ್ನ ಕೆಲ ದಲಿತ ಮುಖಂಡರು ವಿರೋಧಿಸಿ ಯಾವುದೇ ತಪ್ಪನ್ನ ಮಾಡದ ಪಂಚಾಯತ್ ಅಧ್ಯಕ್ಷರು ಕ್ಷಮಾಪಣೆಯನ್ನ ಯಾಕೆ ಕೇಳಬೇಕು ಎಂದು ದೂರುದಾರರ ವಿರುದ್ಧ ವಾಕ್ಸಮರ ನಡೆಸಿ, ಠಾಣೆಯಿಂದ ಹೊರಬಂದರು.
ಈ ಸಂದರ್ಭ ಏಕಾಏಕಿ ಠಾಣೆಯಿಂದ ಹೊರಬಂದ ದೂರು ನೀಡಲೆಂದು ಬಂದ ಆರತಿ ಎಂಬ ಮಹಿಳೆ ಅಲ್ಲಿದ್ದ ದಲಿತ ಮುಖಂಡರೋರ್ವರ ಮೇಲೆ ಹರಿಹಾಯ್ದು ಬಂದು ಕಾಲರ್ ಪಟ್ಟಿ ಹಿಡಿದು ಹಲ್ಲೆಗೆ ಯತ್ನಿಸಿದ್ದು, ಇದರಿಂದ ಆಕ್ರೋಶಿತರಾದ ಅಲ್ಲಿದ್ದ ಗುಂಪೊಂದು ಆಕೆಯ ಮೇಲೆ ಪ್ರತಿದಾಳಿ ನಡೆಸಿದೆ. ಗಲಾಟೆ ಉಂಟಾಗಿ ಠಾಣೆಯಲ್ಲಿ ಕೆಲಕಾಲ ಉದ್ವೀಘ್ನ ವಾತಾವರಣ ಸೃಷ್ಟಿಯಾಯಿತು. ನಂತರ ಪೊಲೀಸರು ಈ ಘಟನೆಯಲ್ಲಿ ಗಾಯಗೊಂಡ ಆರತಿ ಮತ್ತು ಇನ್ನೋರ್ವ ಮಹಿಳೆಯನ್ನ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಲಿತ ದೌರ್ಜನ್ಯ ಪ್ರಕರಣದ ದುರುಪಯೋಗಕ್ಕೆ ಆಕ್ರೋಶ
ದಲಿತ ದೌರ್ಜನ್ಯ ಪ್ರಕರಣದ ಹೆಸರಿನಲ್ಲಿ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ದಲಿತ ಸಂಘರ್ಷ ಸಮಿತಿಯು, ಈ ಪ್ರಕರಣದಲ್ಲಿ ಅನಾವಶ್ಯಕವಾಗಿ ಪಂಚಾಯತ್ ಅಧ್ಯಕ್ಷರನ್ನ ತಂದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೂ ಕೂಡ ಕೋಟ ಠಾಣೆಯಲ್ಲೇ ೧೦ ಸುಳ್ಳು ದಲಿತ ದೌರ್ಜನ್ಯ ಪ್ರಕರಣವನ್ನ ದಾಖಲಿಸಿದ್ದು. ಇವರ ಈ ನಡವಳಿಕೆಯಿಂದ ದಲಿತ ಚಳುವಳಿಗೆ ಹಿನ್ನೆಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.