ಮಂಗಳೂರು, ಜೂ19(Daijiworld News/SS): ಉದ್ಯೋಗ ನಿಮಿತ್ತ ಕುವೈಟ್ಗೆ ತೆರಳಿ, ಬಳಿಕ ಅಲ್ಲಿ ವಂಚನೆಗೆ ಒಳಗಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಸಂತ್ರಸ್ತರ ಬಿಡುಗಡೆ ವಿಚಾರದಲ್ಲಿ ಮತ್ತೆ ಗೊಂದಲ ಮುಂದುವರಿದಿದೆ.
ಕುವೈಟ್ನಲ್ಲಿರುವ ಸಂತ್ರಸ್ತರು ಭಾರತಕ್ಕೆ ಬಿಡುಗಡೆಗೊಳ್ಳಬೇಕಾದರೆ ಜಿಪಿ (ಸರ್ಕಾರಿ ಯೋಜನೆ)ಪತ್ರವನ್ನು ಶೋನ್(ಕಾರ್ಮಿಕ ಪರವಾದ ನ್ಯಾಯಾಲಯ ವ್ಯವಸ್ಥೆ)ಗೆ ಹಾಜರುಪಡಿಸಬೇಕು ಎಂದು ಮೂಲಗಳು ತಿಳಿಸಿವೆ. ಕುವೈಟ್ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ 24 ಸಂತ್ರಸ್ತರ ಪೈಕಿ ಔದ್ಯೋಗಿಕ ವ್ಯವಹಾರ ಇತ್ಯರ್ಥಗೊಂಡ 53 ಮಂದಿ ಕೂಡಲೇ ಜಿ.ಪಿ (ಗವರ್ನಮೆಂಟ್ ಪ್ರಾಜೆಕ್ಟ್) ಲೆಟರ್ ಹಾಗೂ ಭಾರತಕ್ಕೆ ಹಿಂತಿರುಗುವ ಟಿಕೆಟ್ ಸಿದ್ಧಪಡಿಸಿಕೊಳ್ಳುವಂತೆ ಉದ್ಯೋಗದಾತ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತದಿಂದ 53 ಮಂದಿಯನ್ನು ಸರಕಾರದ ಪರವಾದ ಕೆಲಸಕ್ಕೆ ಎಂದು ಕರೆಸಿ ಬಳಿಕ ಖಾಸಗಿ ಕಂಪನಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೀಸಾ ರದ್ದುಗೊಂಡು ಪಾಸ್ಪೋರ್ಟ್ ಲಭಿಸಬೇಕಾದರೆ ಜಿಪಿ ಲೆಟರ್ನ್ನು ಕಡ್ಡಾಯವಾಗಿ ಶೋನ್ಗೆ ಸಲ್ಲಿಸಬೇಕಾಗಿದೆ. ಆದರೆ, 53 ಮಂದಿ ಭಾರತೀಯ ಸಂತ್ರಸ್ತರಿಗೆ ಜಿಪಿ ಲೆಟರ್ ಹಾಗೂ ವಿಮಾನದ ಟಿಕೆಟ್ ನೀಡುವುದು ಯಾರೆನ್ನುವುದು ಇನ್ನೂ ಗೊಂದಲವಾಗಿ ಮುಂದುವರಿದಿದೆ.
ವ್ಯವಹಾರ ಒಂದು ಹಂತದಲ್ಲಿ ಇತ್ಯರ್ಥಗೊಂಡಿರುವ 53 ಮಂದಿ ಸಂತ್ರಸ್ತರನ್ನು ಭಾರತಕ್ಕೆ ವಾಪಾಸು ಕಳುಹಿಸುವ ವ್ಯವಸ್ಥೆ ಮೊದಲು ನಡೆಯಲಿ. ಬಳಿಕ ಉಳಿದವರ ವ್ಯವಸ್ಥೆ ಮಾಡೋಣ ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿರುವುದಾಗಿ ಭಾರತೀಯ ಇಂಜಿನಿಯರ್ಗಳ ಸಂಸ್ಥೆ ಕುವೈತ್ ಘಟಕದ ಸದಸ್ಯ ಮೋಹನ್ದಾಸ್ ಕಾಮತ್ ತಿಳಿಸಿದ್ದಾರೆ.
ಈ ನಡುವೆ ಸಮರ್ಪಕ ವೇತನವೂ ಇಲ್ಲದೆ, ಈಗ ಕೆಲಸವೂ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ತಮಗೆ ಭಾರತಕ್ಕೆ ಮರಳಲು ಉಚಿತ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ಎಲ್ಲ 74 ಸಂತ್ರಸ್ತರು ಭಾರತೀಯ ವಿದೇಶಾಂಗ ಸಚಿವರಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿಲ್ಲ.