ಬಂಟ್ವಾಳ, ಮೇ. 05 (DaijiworldNews/AA): ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯು ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು.


ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ನದಿ ಬದಿಯಲ್ಲಿರುವ ಅನೇಕ ಅಂಗಡಿಗಳ ಹಾಗೂ ಪ್ಲ್ಯಾಟ್ ಗಳಿಂದ ಹೊರಬರುವ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿ ಸೇರುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲಾಖೆಗಳಿಂದ ಪುರಸಭೆಗೆ ನೋಟೀಸ್ ಜಾರಿಯಾಗಿದೆಯಾದರೂ ಈ ಬಗ್ಗೆ ಸಭೆಯ ಅಜೆಂಡಾದಲ್ಲಿ ಬರದೆ ಅಧಿಕಾರಿಗಳ ಬೇಜಾವಬ್ದಾರಿ ಕುರಿತು ಹಿರಿಯ ಸದಸ್ಯ ಎ.ಗೋವಿಂದ ಪ್ರಭು ವಿಚಾರ ಪ್ರಸ್ತಾಪಿಸಿದರು.
ಮಾಂಸದಂಗಡಿ, ಮೀನು ಅಂಗಡಿಗಳ ಕೊಳಚೆ ನೀರು ನದಿಗೆ ಸೇರುವುದರ ಜೊತೆ ತ್ಯಾಜ್ಯ, ಕಸಗಳು ನೀರಿಗೆ ಎಸೆಯುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ಕೊಳಕು ನೀರನ್ನು ಕುಡಿಯುವ ಜನತೆ ಏನು ಮಹಾತಪ್ಪು ಮಾಡಿದೆ? ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ನೋಟಿಸ್ ಜಾರಿಯಾದರೂ ಪುರಸಭೆ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.
ಈ ವಿಚಾರ ಗಮನಕ್ಕೆ ಬಂದಿದೆ, ಅಂಗಡಿ ಮಾಲೀಕರನ್ನು ಸಂಪರ್ಕ ಮಾಡುವ ಕೆಲದ ಮಾಡಿದ್ದೇನೆ ಮುಂದೆ ಸೂಕ್ತವಾದ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಾಧಿಕಾರಿ ಸದಸ್ಯರಿಗೆ ನೀಡಿದರು.
ಮಳೆಗಾಲ ಪ್ರಾರಂಭವಾದರೂ ರಸ್ತೆ ದುರಸ್ತಿ, ಚರಂಡಿ ಹೂಳೆತ್ತುವ ಕಾರ್ಯದ ಬಗ್ಗೆ ಟೆಂಡರ್ ಕರೆಯದ ಹಾಗೂ ವಿವಿಧ ಕಾಮಗಾರಿಗಳ ಯೋಜನೆಗಳ ಬಗ್ಗೆ, ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಗೆ ಬೇಕಾದ ವ್ಯವಸ್ಥೆಗಾಗಿ ನಿಯಮಾನುಸಾರ ಟೆಂಡರ್ ಕರೆಯದೆ ಮೀನಮೇಷ ಎಣಿಸಿದ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸಿಬ್ಬಂದಿಗಳಿಗೆ ಟೆಂಡರ್ ಕರೆಯಲು ನೋಟಿಸ್ ಜಾರಿಮಾಡಿದ್ದೇನೆ. 15 ದಿನಗಳ ಕಾಲಾವಕಾಶ ನೀಡಿದ್ದೇನೆ, ಅದರೊಳಗೆ ಕೆಲಸ ಮಾಡದೇ ಹೋದಲ್ಲಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮವಹಿಸುವುದಾಗಿ ಮುಖ್ಯಾಧಿಕಾರಿ ನಝೀರ್ ತಿಳಿಸಿದರು.
ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಬಿ.ಕಸ್ಬಾ ಗ್ರಾಮದ ಜಮೀನಿನ ಮೇಲೆ 400 ಕೆ.ವಿ. ಉಡುಪಿ ಕಾಸರಗೋಡು ಟ್ರಾನ್ಸ್ ಮಿಷನ್ ಲೈನ್ ನ ವಿದ್ಯುತ್ ತಂತಿಗಳನ್ನು ಎಳೆಯಲು ನಿರಪೇಕ್ಷಣಾ ಪತ್ರ ನೀಡುವಂತೆ ಕೋರಿ ಪುರಸಭೆಗೆ ಕೇಳಿದ ಪತ್ರವನ್ನು ಸಭೆಯ ಮುಂದಿಟ್ಟ ವೇಳೆ ಸದಸ್ಯರು ಈ ಜಮೀನು ಸರ್ಕಾರದ್ದಲ್ಲ, ಪುರಸಭೆಯದ್ದಾಗಿದ್ದು, ಬಡ ವರ್ಗದ ಜನರಿಗೆ ನಿವೇಶನಕ್ಕೆ ಹಂಚಲು ಉಳಿಸಿಕೊಂಡ ಜಾಗವಾಗಿದೆ. ಹಾಗಾಗಿ ಈ ಜಾಗದ ಮೇಲೆ ಹಾದು ಹೋಗಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಬಳಿ ಪುರಸಭೆಯ ನಿಯೋಗ ತೆರಳುವ ಕುರಿತು ಏನಾಯಿತು? ಎಂದು ಸದಸ್ಯ ಹರಿಪ್ರಸಾದ್ ಈ ಕುರಿತು ಪ್ರಶ್ನಿಸಿದರು.
ಒಂದನೇ ಹಂತದ ನೀರು ಸರಬರಾಜು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಗೆ ಅಡ್ಡಿಯಾಗಿರುತ್ತದೆ. ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದೆ. ಸಮಸ್ಯೆಗೆ ಪರಿಹಾರ ನೀಡಬೇಕು. ಈ ಕುರಿತು ಏಳು ಸಲ ನಿರಂತರವಾಗಿ ಪ್ರಯತ್ನಿಸಿದ್ದೇನೆ. ಹೊಸ ಮುಖ್ಯಾಧಿಕಾರಿ ಬಂದ ಮೇಲೆಯೂ ಮನವಿ ನೀಡಿದ್ದೆವು. ಉಸ್ತುವಾರಿ ಮಂತ್ರಿಗಳಿಗೂ ಮನವಿ ಕೊಟ್ಟು ಕುಡಿಯುವ ನೀರಿನ ವಿತರಣಾ ಅವ್ಯವಸ್ಥೆ ಕುರಿತು ತಿಳಿಸಿದ್ದೆ ಎಂದಿದ್ದೆ. 15 ದಿನಗಳೊಳಗೆ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ. ಕೊಡದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುವುದಾಗಿ ವಾಸು ಪೂಜಾರಿ ಹೇಳಿದರು.
ಬಂಟ್ವಾಳದಲ್ಲಿ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲ, ಎಲ್ಕವೂ ಅಧಿಕಾರಿಗಳದ್ದೇ ಕಾರುಬಾರು ಎಂದು ಮಹಮ್ಮದ್ ಶರೀಫ್ ಕಿಡಿಕಾರಿದರು.
15 ತಿಂಗಳಾದರೂ ಡಿಸಿ ಬರುವುದಿಲ್ಲ ಎಂದು ಮಹಮ್ಮದ್ ನಂದರಬೆಟ್ಟು ಹೇಳಿದರೆ, ಡಿಸಿ ಬಂದದ್ದೇ ನೆನಪಿಲ್ಲ ಎಂದು ಉಪಾಧ್ಯಕ್ಷ ಮೊನೀಶ್ ಆಲಿ ಅವರ ಮಾತಿಗೆ ಸಾಥ್ ನೀಡಿದರು.
ಒಟ್ಟಿನಲ್ಲಿ ಯಾರಿಂದಲೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಫಲತೆ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಸತ್ಯ ವಿಚಾರವಾಗಿದೆ.