ಮಂಗಳೂರು, ಮೇ. 05 (DaijiworldNews/AA): ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ಹಸ್ತಾಂತರಿಸಲು ಕಾಂಗ್ರೆಸ್ ಸರ್ಕಾರ ನಿರಾಕರಿಸುತ್ತಿರುವ/ ಹಿಂದೇಟು ಹಾಕುತ್ತಿರುವುದು ಆತಂಕಕ್ಕೆ ಹಾಗೂ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ನಿರಾಕರಣೆ ನಡೆಯು ಕೇವಲ ಆಡಳಿತಾತ್ಮಕ ವಿಳಂಬ ಮಾತ್ರವಲ್ಲ. ರಾಜ್ಯ ಸರ್ಕಾರದ ಆಶ್ರಯದಲ್ಲಿ ಬೆಳೆಯುತ್ತಿರುವ (ಇಸ್ಲಾಮಿಕ್) ಮೂಲಭೂತವಾದಿ ಶಕ್ತಿಗಳೊಂದಿಗಿನ ಮೈತ್ರಿಯನ್ನು ರಕ್ಷಿಸಲು ದುರುದ್ದೇಶಪೂರ್ವಕವಾಗಿ ತನಿಖೆ ತಡೆಯುವ ಪ್ರಯತ್ನದ ಪ್ರತಿಬಿಂಬಿವಾಗಿದೆ.



ಸ್ಪೀಕರ್, ಗೃಹ ಸಚಿವರು ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕರ ಸಂಘಟಿತ ಪ್ರಯತ್ನದಂತೆ, ಈ ಭೀಕರ ಹತ್ಯೆ ಪ್ರಕರಣವನ್ನು ಅತ್ಯಂತ ತರಾತುರಿಯಲ್ಲಿ "ಸಾಮಾನ್ಯ ಅಪರಾಧ ಪ್ರಕರಣ" ದಂತೆ ಹಗುರವಾಗಿ ಪರಿಗಣಿಸಿ ಕೈತೊಳೆದುಕೊಂಡಿರುವುದು ಹಾಗೂ ತನಿಖೆ ಆರಂಭಕ್ಕೂ ಪೂರ್ವದಲ್ಲೇ, ಈ ಘಟನೆಯಲ್ಲಿ ಯಾವುದೇ ಸೈದ್ಧಾಂತಿಕ ಉದ್ದೇಶ ಹಾಗೂ ಇಸ್ಲಾಮಿಕ್ ಮೂಲಭೂತವಾದಿಗಳ ಪಾತ್ರವನ್ನು ನಿರಾಕರಿಸಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ನ್ಯಾಯೋಚಿತ ತನಿಖೆಗೆ ಬೆಂಬಲ ನೀಡಬೇಕಾಗಿದ್ದ ಸ್ಪೀಕರ್, ತನಿಖೆ ಆರಂಭಕ್ಕೂ ಮೊದಲೇ ತನಿಖೆಯ ಹಾದಿ ತಪ್ಪಿಸುವಂತೆ, ಪ್ರಸ್ತುತ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿ ಕ್ಲೀನ್ ಚಿಟ್ ಕೊಟ್ಟಿರುವುದು ಅಚ್ಚರಿ ಮತ್ತು ಅಘಾತಕಾರಿ. ಇದಕ್ಕೆ ಕಾರಣವೇನು?
ಸೆಪ್ಟೆಂಬರ್ 2022 ರಲ್ಲಿ ಪಿಎಫ್ಐ ಅನ್ನು ನಿಷೇಧಿಸಲಾಗಿದ್ದರೂ, 2023 ರಲ್ಲಿ ಇಂಡಿಯಾ ಟುಡೇ ನಡೆಸಿದ ರಹಸ್ಯ ಕಾರ್ಯಾಚರಣೆಯಂತಹ ತನಿಖಾ ವರದಿಗಳು, ನಿಷೇಧಿತ ಸಂಘಟನೆಯ ಸದಸ್ಯರು ಮರುಸಂಘಟಿತರಾಗಿ ಎಸ್ಡಿಪಿಐ (ಪಿಎಫ್ಐ ಸಂಘಟನೆಯ ರಾಜಕೀಯ ಮುಖ ಎಸ್ಡಿಪಿಐ) ಬ್ಯಾನರ್ ಅಡಿಯಲ್ಲಿ ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದವು. ಕರಾವಳಿ ಕರ್ನಾಟಕದಲ್ಲಿ ಎಸ್ಡಿಪಿಐ ನಾಯಕರು "ಪಿಎಫ್ಐ ಕಾರ್ಯಕರ್ತರು ಈಗ ಎಸ್ಡಿಪಿಐ ಕಾರ್ಯಕರ್ತರು" ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇವರು ತಮ್ಮ ಗುರುತನ್ನು ಮರೆಮಾಚಿ ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಕಾರ್ಯಕರ್ತರಿಗೆ ದಕ್ಷಿಣ ಕನ್ನಡ ಮತ್ತು ಬೇರೆಡೆಯಿಂದ ಹಣ ಮತ್ತು ಲಾಜಿಸ್ಟಿಕಲ್ ವ್ಯವಸ್ಥೆಯ ಸಹಾಯ ಸಿಗುತ್ತಿದ್ದು, ಅದು ಅವರ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಬಲಪಡಿಸಿದೆ.
2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಪ್ರವೀಣ್ ನೆಟ್ಟಾರು ಪ್ರಕರಣದ ಪ್ರಮುಖ ಆರೋಪಿಗಳು ಇನ್ನೂ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದರು ಎನ್ನುವುದಕ್ಕೆ ಜ್ವಲಂತ ನಿದರ್ಶನ ಇಂತಿದೆ.
* ಶಸ್ತ್ರಾಸ್ತ್ರ ನಿರ್ವಾಹಣೆಯಲ್ಲಿ ಪಿಎಫ್ಐ ತರಬೇತಿ ಪಡೆದ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಬಂಧಿತನಾದ ಪ್ರಮುಖ ಸೂತ್ರದಾರ ಮುಸ್ತಫಾ ಪೈಚಾರ್ನನ್ನು ಮೇ 2024 ರಲ್ಲಿ ಹಾಸನದಲ್ಲಿ ಬಂಧಿಸಲಾಯಿತು.
* ಪಿಎಫ್ಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು ಮತ್ತು ಸಂಘಟನೆಯ ಸೇವಾ ತಂಡದ ಮುಖ್ಯಸ್ಥ ಕೊಡಾಜೆ ಮೊಹಮ್ಮದ್ ಶೆರೀಫ್ನನ್ನು ವಿದೇಶದಿಂದ ಕಾರ್ಯಾಚರಣೆ ನಡೆಸಿ ಡಿಸೆಂಬರ್ 2024 ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
* ಮುಸ್ತಫಾ ಪೈಚಾರ್ ಚೆನ್ನೈಗೆ ಅವಿತುಕೊಳ್ಳಲು ಸಹಾಯ ಮಾಡಿದ ಅತೀಕ್ ಅಹ್ಮದ್ನನ್ನು ಜನವರಿ 2025 ರಲ್ಲಿ ಬಂಧಿಸಲಾಯಿತು.
ಈ ಎಲ್ಲಾ ಬಂಧನಗಳನ್ನು ಮಾಡಿದ್ದು ಎನ್ಐಎ ಹೊರತು ರಾಜ್ಯ ಪೊಲೀಸರಲ್ಲ. ಇದು ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್ಐ-ಸಂಬಂಧಿತ ವ್ಯಕ್ತಿಗಳು ಕರ್ನಾಟಕವು ಸುರಕ್ಷಿತ ತಾಣವಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಇದು ಕೂಡಾ ಪ್ರತ್ಯೇಕ ಪ್ರಕರಣವಲ್ಲ - ಇದು ಕಾಂಗ್ರೆಸ್ ಪಕ್ಷದ ಈ ಹಿಂದಿನ ಪರಿಚಿತ ಮಾದರಿಯನ್ನು ಪ್ರತಿಬಿಂಬಿಸುತ್ತದೆ: ಫಾಸಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲು ಉತ್ಸಾಹ ತೋರಿದ ಅದೇ ನಾಯಕರು, ಸುಹಾಸ್ ಶೆಟ್ಟಿಯನ್ನು 'ರೌಡಿ ಶೀಟರ್' ಎಂದು ಹಣೆಪಟ್ಟಿ ಕಟ್ಟಿ, ಪ್ರಕರಣದ ಸೈದ್ಧಾಂತಿಕ ವಾಸ್ತವತೆಯನ್ನು ಮರೆಮಾಚಲು ಪ್ರಯತ್ನಿಸಿದರು. ಆರಂಭದಲ್ಲಿ "ವೈಯಕ್ತಿಕ ದ್ವೇಷ" ಎಂದು ಬಿಂಬಿಸಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಸತ್ಯ ಒಂದೊಂದಾಗಿಯೇ ಹೊರಬರಲು ಪ್ರಾರಂಭಿಸಿದ ತಕ್ಷಣ ಇದ್ದಕ್ಕಿದ್ದಂತೆ "ಕೋಮು ಸಂಘರ್ಷದ ಕೇಂದ್ರ ಬಿಂದು"ವಾಗಿ ತಿರುವು ಪಡೆಯಿತು.
ಈ ಸುಳ್ಳು ಆರೋಪಗಳನ್ನು ನಿಲ್ಲಿಸಿ, ತನಿಖೆಯನ್ನು ದಾರಿ ತಪ್ಪಿಸುವುದನ್ನು ಮತ್ತು ಸತ್ಯವನ್ನು ಮರೆಮಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು. ದಕ್ಷಿಣ ಕನ್ನಡ ಮತ್ತು ಕರ್ನಾಟಕದ ಜನರಿಗೆ ನಿಜವಾದ ಪಾರದರ್ಶಕತೆ ತನಿಖೆ ಮತ್ತು ನ್ಯಾಯಬೇಕು. ಕೇವಲ ನೆಪಗಳು, ಕಾಗದದ ಮೇಲಿನ ತನಿಖೆಗಳು ಅಥವಾ ಸರ್ಕಾರ ತನಗೆ ಬೇಕಾದಾಗ ಮೌನವಹಿಸುವುದು ಎಂದಿಗೂ ಸಹಿಸಲಸಾಧ್ಯ.
ನಮ್ಮ ಆಗ್ರಹವೇನೆಂದರೆ ಸುಹಾಸ್ ಶೆಟ್ಟಿ ಪ್ರಕರಣವನ್ನು ತಕ್ಷಣವೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವರ್ಗಾಯಿಸಬೇಕು. ಇದು ಕೇವಲ ಒಂದು ಕೊಲೆ ಪ್ರಕರಣ ಮಾತ್ರವಲ್ಲ, ನಮ್ಮ ನಾಡನ್ನು ವಿಷಪೂರಿತಗೊಳಿಸುತ್ತಿರುವ ಮತ್ತು ರಕ್ತಸಿಕ್ತಗೊಳಿಸುತ್ತಿರುವ ರಾಷ್ಟ್ರ ವಿರೋಧಿ ಜಾಲವನ್ನು ಬೇರುಸಹಿತ ಕಿತ್ತುಹಾಕುವುದು ಅತ್ಯಂತ ಅತ್ಯಗತ್ಯವಾಗಿದೆ. ಈ ಕಾಂಗ್ರೆಸ್ ಸರ್ಕಾರದ ಪೋಷಿಸುತ್ತಿರುವ ಮತ್ತು ಭಾರತದ ಪ್ರಗತಿಯನ್ನು ಹಳಿ ತಪ್ಪಿಸುವ ಗುರಿ ಹೊಂದಿರುವ ಹೇಯ ತುಷ್ಟೀಕರಣ ರಾಜಕೀಯವನ್ನು ಕೊನೆಗೊಳಿಸುವುದು ಅಷ್ಟೇ ಮುಖ್ಯವಾಗಿದೆ.
ಇದು ಮೂಲಭೂತವಾದ ಮತ್ತು ರಾಷ್ಟ್ರೀಯತೆಯ ನಡುವಿನ ಹೋರಾಟ ಸುಹಾಸ್ಗೆ ಸಿಗುವ ನ್ಯಾಯವು, ತಾಯಿ ಭಾರತ ಮಾತೆಗೆ ಮತ್ತು ಕರ್ನಾಟಕಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ನಮ್ಮ ಎಲ್ಲಾ ಹಿಂದೂ ಕಾರ್ಯಕರ್ತರಿಗೆ ಸಲ್ಲುವ ನ್ಯಾಯವಾಗಿದೆ.