ಬೆಳ್ತಂಗಡಿ, ಮೇ. 06 (DaijiworldNews/TA): ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೋಲೀಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹಾಸನ ಜಿಲ್ಲೆಯ ಮಾಲೂರು ತಾಲೂಕಿನ ಅಂಗಡಿಹಳ್ಳಿ ನಿವಾಸಿ ಶಿವರಾಜ್ ಯಾನೆ ಶಿವಕೇರಿ ( 32) ಹಾಗೂ ಮಂಗಳೂರು ಕಣ್ಣೂರು ನಿವಾಸಿ ಸಂತೋಷ್ ( 26) ಎಂಬಾತನನ್ನು ಬಂಧಿಸಲಾಗಿದೆ.

ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ ಕೊಲ್ಪೆದಬೈಲು ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಎ. 20 ರಂದು ಕಳ್ಳರು ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಕೋಣೆಯ ಕಪಾಟಿನಲ್ಲಿದ್ದ ರೂ 13,72,000/- ರೂ ಮೌಲ್ಯದ 160.5 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ರೂ 30,000 ನಗದು ಹಣವನ್ನು ಕಳವು ಮಾಡಿದ್ದರು.
ಈ ಬಗ್ಗೆ ವಸಂತಿ ಹೆಗ್ಡೆಯವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೋಲೀಸರ ತಂಡ ಮೇ.4 ರಂದು ಸಂಜೆ ಕಳ್ಳತನ ಮಾಡಿದ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ 106 ಗ್ರಾಂ ತೂಕದ ಚಿನ್ನಾಭರಣವನ್ನು ಸ್ವಾದೀನಪಡಿಸಿಕೊಂಡಿದ್ದಾರೆ.