ಮಂಗಳೂರು, ಮೇ. 06 (DaijiworldNews/TA): ನಗರದ ಹೆದ್ದಾರಿ ಬದಿ ಇಕ್ಕೆಲಗಳಲ್ಲೂ ಸೀಯಾಳ ಚಿಪ್ಪು, ಹಣ್ಣು ಹಂಪಲು ತ್ಯಾಜ್ಯ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ರಾಶಿ ಹಾಕಲಾಗಿದ್ದು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ, ಜಿಲ್ಲಾಧಿಕಾರಿ, ಆಯುಕ್ತರ ಸೂಚನೆಯಂತೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ದಂಡ ವಿಧಿಸಿ, ವಸ್ತುಗಳನ್ನು, ಗಾಡಿಯನ್ನು ಮುಟ್ಟುಗೋಲು ಹಾಕಿ ಕ್ರಮಕೈಗೊಳ್ಳಲಾಯಿತು.






ತಲಾ ಹತ್ತು ಸಾವಿರ ಪ್ರತೀ ಅಂಗಡಿಗಳಿಗೆ ದಂಡ ವಿಧಿಸಿ ವಸೂಲಿ ಮಾಡಲಾಯಿತು. ಒಂದು ವರ್ಷದಿಂದ ಹೆದ್ದಾರಿ ಬದಿ ಮೀನು ಮಾರಾಟ, ಹಣ್ಣು ಹಂಪಲು, ಹಲಸಿನ ಕಾಯಿ, ಸೀಯಾಳ ಮಾರಾಟ ಹೆಚ್ಚುತ್ತಿದ್ದು, ಒಂದೆಡೆ ತ್ಯಾಜ್ಯ ವಿಲೇವಾರಿ ಮಾಡದೆ ರಾಶಿ ಹಾಕಿದ್ದರೆ, ಇನ್ನೊಂದೆಡೆ ವಾಹನಗಳು ಹೆದ್ದಾರಿಯಲ್ಲಿಯೇ ನಿಲ್ಲಿಸಿ ಖರೀದಿಗೆ ಮುಂದಾಗುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗುತ್ತಿದೆ. ಜಿಲ್ಲಾಧಿಕಾರಿಗೆ, ಆಯುಕ್ತರಿಗೆ ಈ ಬಗ್ಗೆ ಸಾರ್ವಜನಿಕರು ದೂರನ್ನು ನೀಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಸುರತ್ಕಲ್ ಪಾಲಿಕೆ ವಿಭಾಗಾಧಿಕಾರಿ ವಾಣಿ ಆಳ್ವ ಹೇಳಿದರು.
ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಇವುಗಳ ಬಳಕೆಯೂ ಆಗುತ್ತಿದೆ. ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು. ವ್ಯಾಪಾರಸ್ಥರು ಈ ನಿಟ್ಟಿನಲ್ಲಿ ಪಾಲಿಕೆಯೊಂದಿಗೆ ಸಹಕರಿಸಿ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚಿಸಿದರು. ಕಂದಾಯಧಿಕಾರಿ ಸುಶಾಂತ್, ಅಧಿಕಾರಿಗಳಾದ ದೇವೇಂದ್ರ ಪರಾರಿ, ಸಂಜಯ್, ಕೃಷ್ಣ ಪ್ರವೀಣ್, ಸುಭಾಷ್, ಯಾದವ, ಶ್ರವಣ್, ರೋಶನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.