ಮಂಗಳೂರು,ಜೂ 19 (Daijiworld News/MSP): ಸಿ.ಪಿ.ಎಂ ಪಕ್ಷದ ಹಿರಿಯ ರಾಜ್ಯ ಮುಖಂಡ, ಸಿಐಟಿಯು ರಾಜ್ಯಾಧ್ಯಕ್ಷ ಬಿ. ಮಾಧವ ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿ ಪಡೀಲ್ ನ ತನ್ನ ಮನೆಯಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಸಿ.ಪಿ.ಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ , ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಸಿ.ಪಿ.ಎಂ ಕಾರ್ಯದರ್ಶಿ ಯಾಗಿ, ದ.ಕ.ಜಿಲ್ಲಾ ಸಿಐಟಿಯು ಅಧ್ಯಕ್ಷರಾಗಿ, ಬೀಡಿ ಪೆಡರೇಶನ್ ರಾಷ್ಟ್ರೀಯ ಅಧ್ಯಕ್ಷರಾಗಿ, ವಿಮಾ ನೌಕರರ ಸಂಘದ ಅಧ್ಯಕ್ಷರಾಗಿ ಬಿ.ಮಾಧವ ಅವರು ಕಾರ್ಯನಿರ್ಹಿಸಿದ್ದರು. ಸುದೀರ್ಘ ಕಾಲ ಕಾರ್ಮಿಕ ಚಳವಳಿ, ಎಡ ಪಕ್ಷಗಳ ಚಳವಳಿಯ ನೇತೃತ್ವ ವಹಿಸಿದ್ದ ಬಿ.ಮಾಧವ ಅವರ ಅಗಲಿಕೆಯು ಕಾರ್ಮಿಕ ವರ್ಗದ ಹೋರಾಟಕ್ಕೆ ಬಹುದೊಡ್ಡ ನಷ್ಟವಾಗಿದೆ.
ಲೇಖಕ – ಅನುವಾದಕ :
ಕಾರ್ಮಿಕ ಹೋರಾಟದ ನಡುವೆಯೇ ಲೇಖಕರಾಗಿ , ಅನುವಾದಕರಾಗಿ ಬಿ.ಮಾಧವ ಅವರು ಜನಪ್ರಿಯರಾಗಿದ್ದರು. ಕಾರ್ಮಿಕ ಹೋರಾಟದ ಚರಿತ್ರೆ, ಎಡ ಸಿದ್ಧಾಂತ, ಕಾರ್ಲ್ ಮಾರ್ಕ್ಸ್ ಕುರಿತಾಗಿ ಪುಸ್ತಕಗಳನ್ನು ಬಿ.ಮಾಧವ ಅವರು ಪ್ರಕಟಿಸಿದ್ದರು. ಇದಲ್ಲದೆ ಬಿ.ಮಾಧವ ಅವರೊಬ್ಬ ಉತ್ತಮ ಅನುವಾದಕರಾಗಿದ್ದರು, ಯಾವುದೇ ಬಹಿರಂಗ ಸಭೆ, ಸಮಾವೇಶಗಳಲ್ಲಿ ರಾಷ್ಟ್ರೀಯ ನಾಯಕರುಗಳ ಇಂಗ್ಲಿಷ್, ಹಿಂದಿ, ಮಲಯಾಳಂ ಭಾಷಣವನ್ನು ಬಿ.ಮಾಧವ ಅವರು ಸಮರ್ಥವಾಗಿ ಅನುವಾದ ಮಾಡುತ್ತಿದ್ದರು.
ಬೀಡಿ ಕಾರ್ಮಿಕರ ಹಿತಾಸಕ್ತಿಗಾಗಿ ಅನೇಕ ಹೋರಾಟಗಳಿಗೆ ನೇತೃತ್ವ ನೀಡಿದ ಬಿ.ಮಾಧವ ಅವರು, ಬೀಡಿ ಕಾರ್ಮಿಕರು ಹಾಗೂ ಇತರ ಫ್ಯಾಕ್ಟರಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ, ಹಾಗೂ ಕಾರ್ಮಿಕರಲ್ಲಿ ಸೈದ್ಧಾಂತಿಕ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದರು.
ಕರಾವಳಿ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳಾದಾಗ ಅದರ ವಿರುದ್ಧ ಧ್ವನಿ ಎತ್ತಿ, ಸೌಹಾರ್ದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಬಿ.ಮಾಧವ ಅವರು ಬಹುವಾಗಿ ಶ್ರಮಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಹೋರಾಟ, ಕಾರ್ಮಿಕ ಚಳವಳಿ, ಸೌಹಾರ್ದ ಕಾರ್ಯಕ್ರಮಗಳಿಗೆ ನಾಯಕತ್ವ ನೀಡಿದ ಬಿ.ಮಾಧವ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ