ಉಡುಪಿ, ಜೂ19(Daijiworld News/SS): ಕಳೆದ 5 ವರ್ಷಗಳ ಹಿಂದೆ ಭೂಮಿ ಬಿರುಕು ಬಿಟ್ಟು ಆತಂಕ ಸೃಷ್ಟಿಸಿದ್ದ ಮಣಿಪಾಲ ಮಂಚಿಕೇರಿ ಪರಿಸರದಲ್ಲಿ ಮತ್ತೆ ಭೂಮಿ ಬಾಯಿ ತೆರೆದುಕೊಂಡಿದ್ದು, ನಾಗರಿಕರಲ್ಲಿ ಆತಂಕ ತಲೆದೋರಿದೆ. 1 ಇಂಚಿನಷ್ಟು ಬಾಯಿ ಬಿಟ್ಟಿದ್ದ ಭೂಮಿಯಲ್ಲಿ ಸದ್ಯ 8 ಇಂಚಿಗೂ ಮೀರಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನಲೆ, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆ ಭಾಗದ ಜನರಿಗೆ ಕುತೂಹಲದ ಜತೆಗೆ ಆತಂಕವೂ ತಂದೊಡ್ಡಿದೆ. ಹಿಂದೆ ಬಿರುಕು ಬಿಟ್ಟಿದ್ದ ವೇಳೆ ಈ ಪರಿಸರದಲ್ಲಿ ನೀರಿನ ಮಟ್ಟವೂ ಏರಿಕೆ ಕಂಡಿತ್ತು.
ಈ ಪರಿಸರದಲ್ಲಿ 2014ರಲ್ಲಿ ಭೂಮಿ ಬಿರುಕು ಬಿಟ್ಟ ಬಗ್ಗೆ ಭೂಗರ್ಭ ತಜ್ಞರ ತಂಡ ಸ್ಥ ಳದಲ್ಲಿ ಅಧ್ಯಯನ ನಡೆಸಿದ್ದರು. ಭೂಮಿ ಒಳಗಿನ ಸಣ್ಣ ಪ್ರಮಾಣದ ಕಂಪನದಿಂದ ಬಿರುಕು ಮೂಡಿದೆ ಎಂದು ತಜ್ಞರ ತಂಡ ಹೇಳಿತ್ತು. ಈ ಪರಿಸರದ ನಿವಾಸಿಯಾಗಿರುವ ರಮೇಶ್ ನಾಯಕ್ ಎಂಬುವರ ಮನೆಯ ಗೋಡೆ ಮತ್ತು ಬಾವಿಯಲ್ಲಿ ಬಿರುಕು ಮೂಡಿದೆ. ಈ ಹಿಂದಿಗಿಂತ ದೊಡ್ಡ ಪ್ರಮಾಣದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಏನಾದರು ಅನಾಹುತ ಸಂಭವಿಸುವ ಭಯ ಸ್ಥಳೀಯರನ್ನು ಕಾಡುತ್ತಿದೆ.
ಇದು ಭೂಕಂಪನದ ವೇಳೆಯಲ್ಲಿ ಕಾಣಿಸಿಕೊಳ್ಳುವ ಬಿರುಕಿನಂತೆ ಗೋಚರವಾಗಿದೆ.