ಮಂಗಳೂರು, ಮೇ. 11 (DaijiworldNews/TA): ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಕದಳಿ ಶ್ರೀ ಮಂಜುನಾಥ ದೇವರ ಮತ್ತು ಬಾಳೆಬೈಲು ಶ್ರೀ ಅರಸು ಧರ್ಮ ಜಾರಂದಾಯ ದೈವದ ಐತಿಹಾಸಿಕ ಭೇಟಿ ಮೇ 18ರ ರವಿವಾರದಂದು ವಿಜೃಂಭಣೆಯಿಂದ ಜರುಗಲಿರುವುದು.

ಮೇ 18ರ ರವಿವಾರ ಸಂಜೆ 5:00ಕ್ಕೆ ಸರಿಯಾಗಿ ಕೆ.ಪಿ.ಟಿ. ಉದಯನಗರದಲ್ಲಿರುವ ಶ್ರೀ ಅರಸು ಜಾರಂದಾಯ, ಬಂಟ ಮತ್ತು ವಾರಾಹಿ ದೈವಸ್ಥಾನ, ಕಲ್ಲೊಟ್ಟೆ ಭಂಡಾರ ದೈವಸ್ಥಾನದಿಂದ ಶ್ರೀ ಅರಸು ಜಾರಂದಾಯ, ಬಂಟ ದೈವಗಳ ಭಂಡಾರ ಸಕಲ ಬಿರುದಾವಳಿಯಿಂದ ಹೊರಟು ರಾತ್ರಿ ಸಮಯ 08.15ಕ್ಕೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವರ ಸನ್ನಿಧಿಯಲ್ಲಿ ಕದಳಿ ಶ್ರೀ ಮಂಜುನಾಥ ದೇವರ ಮತ್ತು ಬಾಳೆಬೈಲು ಶ್ರೀ ಅರಸು ಧರ್ಮ ಜಾರಂದಾಯ ದೈವದ ಐತಿಹಾಸಿಕ ಭೇಟಿ ಜರುಗಲಿರುವುದು ಎಂದು ಹೇಳಲಾಗಿದೆ.
ಭೇಟಿ ಹಿಂದಿದೆ ಐತಿಹಾಸಿಕ ಕಥೆ : ಅನಾದಿಕಾಲದಿಂದಲೂ ಹೆಚ್ಚಿನ ಧರ್ಮದೈವಗಳು ದೇವರ ಭೇಟಿಯಾಗುವ ಸಂಪ್ರದಾಯಗಳು ಇವೆ. ಶ್ರೀ ಅರಸು ಧರ್ಮ ಜಾರಂದಾಯ ಬಾಳೆಬೈಲ್ನಿಂದ ಸತ್ಯ ಧರ್ಮ ಶೋಧನೆಗಾಗಿ ಹೊರಟಾಗ, ದೈವ ಶ್ರೀ ಕದ್ರಿ ಮಂಜುನಾಥನ ಅನುಗ್ರಹ ಕೇಳಿದಾಗ, ದೇವರು ಈ ಊರು ಬಿಟ್ಟು ಹೋಗುವಂತಿಲ್ಲ ಎಂದು ಪ್ರಸಾದ ತೆಂಗಿನಕಾಯಿಯನ್ನು ಉತ್ತರ ದಿಕ್ಕಿಗೆ ಹಾರಿಸಿದರಂತೆ (ಪಾಕ್ಷನದಲ್ಲಿ ತಾರಾಯಿ ಪಾರಯೆ). ಆಗ ಅದು ಒಳಗುಡ್ಡೆ (ಯೆಯ್ಯಡಿ ತೆಂಗೆಯ್ಯ ಬಿದ್ದ ಅಡಿ) ಅಲ್ಲಿಗೆ ಬಂದು ಬಿತ್ತು. ತದನಂತರ ಶ್ರೀ ಅರಸು ಧರ್ಮ ಜಾರಂದಾಯ ಒಳಗುಡ್ಡೆಯಲ್ಲಿ ಬಂದು ನೆಲೆಸಿದ ಎಂದು ಪ್ರತೀತಿ ಇದೆ. ಅದರಂತೆ ಈ ಘಟನೆಗೆ ಸಾಕ್ಷಿಯಾಗಿ ಶ್ರೀ ಧರ್ಮ ಅರಸು ಜಾರಂದಾಯನಿಗೆ (ಬತ್ತಿ ಅನ್ನಗ್ ಸುರುತ್ತ ನೇಮ) ಎಂದು ಶ್ರೀ ಮಲರಾಯ ಮತ್ತು ಶ್ರೀ ಮಂಜುನಾಥನ ಆಜ್ಞೆಯಾಗಿತ್ತು. ಅಂದಾಜು ಸುಮಾರು 48 ವರ್ಷಗಳು ನಿಂತು ಹೋದ ಭೇಟಿ ಮತ್ತೆ ಮರುಕಳಸುವ ಕ್ಷಣ ಬಂದಿದೆ.
ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಈ ಭೇಟಿ ಕಾರಣಾಂತರದಿಂದ ನಿಂತು ಹೋಗಿದ್ದು, ಶ್ರೀ ಅರಸು ಧರ್ಮ ಜಾರಂದಾಯ ದೈವದ ತನ್ನ ಪ್ರತಿ ವಾರ್ಷಿಕ ಜಾತ್ರಾ ಸಮಯದಲ್ಲಿ ಸ್ವಾಮಿಯ ಭೇಟಿಯನ್ನು ನೆನಪಿಸುತ್ತಿದ್ದು, ಅಲ್ಲದೆ ದೈವಸ್ಥಾನದಲ್ಲಿ ಇಟ್ಟಂತಹ ತಾಂಬೂಲ ಪ್ರಶ್ನೆಯಲ್ಲಿಯೂ ದೈವ-ದೇವರು ಮತ್ತೆ ಭೇಟಿಯಾಗದೆ ಇರುವುದರಿಂದ ಗ್ರಾಮಕ್ಕೆ ದೋಷಗಳು ಕಂಡುಬಂದಿರುತ್ತದೆ ಎಂದು ಹೇಳಲಾಗಿದೆ. ಅದಕ್ಕೆ ತಕ್ಕಂತೆ ಪ್ರಾಯಶ್ಚಿತವಾಗಿ ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕವನ್ನು ನೀಡಿ ದೈವದ ಬರುವಿಕೆಗೆ ಕ್ಷೇತ್ರದಿಂದ ಅನುಮತಿಯನ್ನು ಕೋರಲಾಗಿದೆ ಎನ್ನಲಾಗಿದೆ. ಇದೀಗ ಕಾಲ ಕೂಡಿ ಬಂದಿದ್ದು ಪೂರ್ವ ಸಂಪ್ರದಾಯದಂತೆ ಈ ಐತಿಹಾಸಿಕ ಬೇಟಿಯು ಜರುಗಲಿದೆ.