ಉಡುಪಿ, ಮೇ. 12 (DaijiworldNews/AA): "ನಮ್ಮ ನಾಯಕರು ಲೋಕಸಭೆಯಲ್ಲಿ ಹೇಳಿದಂತೆ, ರಾಷ್ಟ್ರದ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ" ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.





ಮೇ 11 ರಂದು ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಭದ್ರತಾ ವಿಷಯದ ಕುರಿತು ಮಾತನಾಡಿದ ಅವರು, "ರಾಷ್ಟ್ರದ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿರುತ್ತೇವೆ. ಅದು ಯುದ್ಧ ಕ್ರಮಗಳ ಬೆಂಬಲವಾಗಲಿ ಅಥವಾ ಹಿಂಪಡೆಯುವಿಕೆಯಾಗಲಿ, ನಾವು ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತೇವೆ" ಎಂದರು.
ಮುಂಗಾರು ಸಿದ್ಧತೆಗಳ ಕುರಿತು ವಿವಿಧ ಇಲಾಖೆಗಳೊಂದಿಗೆ ನಡೆದ ಸಭೆಯ ಬಗ್ಗೆ ಮಾಹಿತಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, "ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ, ಮೆಸ್ಕಾಂ, ಪಿಡಬ್ಲ್ಯೂಡಿ, ಆರೋಗ್ಯ ಮತ್ತು ಕೃಷಿ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳೊಂದಿಗೆ ಮುಂಬರುವ ಮುಂಗಾರು ಮತ್ತು ಕುಡಿಯುವ ನೀರಿನ ಪೂರೈಕೆಗಾಗಿ ಸಿದ್ಧತೆಗಳನ್ನು ಪರಿಶೀಲಿಸಲು ಸಭೆ ನಡೆಸಲಾಯಿತು. ಅವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು, ನಾವು ಅಗತ್ಯ ಸೂಚನೆಗಳನ್ನು ನೀಡಿದ್ದೇವೆ. ಈಗಾಗಲೇ ಮೂರು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ" ಎಂದು ತಿಳಿಸಿದರು.
ಮುಂದುವರೆದು, "ದುರ್ಬಲ ಮತ್ತು ಹಳೆಯ ಮರಗಳನ್ನು ಗುರುತಿಸಿ ತೆಗೆದುಹಾಕಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಹಾನಿಗೊಳಗಾದ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ದುರಸ್ತಿ ಮಾಡಲು ಮೆಸ್ಕಾಂಗೆ ಸೂಚನೆ ನೀಡಲಾಗಿದೆ. ಅನೇಕ ಕಡೆಗಳಲ್ಲಿ ಕಾಲು ಸಂಕಗಳು ಅನಿವಾರ್ಯವಾಗಿದ್ದು, ಈ ವರ್ಷದೊಳಗೆ ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಕಾಲುಸಂಕಗಳನ್ನು ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಈಗಾಗಲೇ 8 ಕೋಟಿ ರೂ. ಬಿಡುಗಡೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
ಕರಾವಳಿ ಭದ್ರತಾ ಸಿದ್ಧತೆಗಳ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿ (ಡಿಸಿ) ಡಾ. ಕೆ. ವಿದ್ಯಾ ಕುಮಾರಿ, ಭದ್ರತಾ ಪಡೆಗಳೊಂದಿಗೆ ಡಿಐಜಿ ಸಭೆ ನಡೆಸಿ, ಕರಾವಳಿ ಪ್ರದೇಶಗಳಲ್ಲಿ ಮಾಕ್ ಡ್ರಿಲ್ಗಳನ್ನು ನಡೆಸಲು ಮತ್ತು ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಟೆಬ್ಮಾ ಶಿಪ್ಯಾರ್ಡ್ನಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು ಕೆಎಂಸಿಯ ಹಿರಿಯ ಮಿಲಿಟರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮುಂದುವರೆದು, "98 ಕಿಮೀ ಉಡುಪಿ ಕರಾವಳಿಯಲ್ಲಿ ಭದ್ರತಾ ಪಡೆಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮೀನುಗಾರರು ಪ್ರತ್ಯೇಕವಾಗಿ ಅಲ್ಲ, ಗುಂಪುಗಳಲ್ಲಿ ಮಾತ್ರ ಸಮುದ್ರಕ್ಕೆ ಇಳಿಯುವಂತೆ ಸಲಹೆ ನೀಡಲಾಗಿದೆ. ತುರ್ತು ಅಗತ್ಯಗಳಿಗಾಗಿ ಒಟ್ಟು 164 ಆರೈಕೆ ಕೇಂದ್ರಗಳು ಮತ್ತು 50 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ 54 ಆಸ್ಪತ್ರೆಗಳನ್ನು ಗುರುತಿಸಲಾಗಿದೆ" ಎಂದರು.
ಮೇ 15 ರ ನಂತರ, ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಬಳಿಕ, ಮಣಿಪಾಲದಲ್ಲಿರುವ ಹಾಸ್ಟೆಲ್ಗಳನ್ನು ತುರ್ತು ವಸತಿಗಾಗಿ ಬಳಸಬಹುದು ಎಂದು ಡಾ. ಕೆ. ವಿದ್ಯಾ ಕುಮಾರಿ ಹೇಳಿದರು. ಎಲ್ಲಾ ರಕ್ಷಣಾ ಉಪಕರಣಗಳನ್ನು ಸಿದ್ಧವಾಗಿಡಲು ಅಗ್ನಿಶಾಮಕ ಇಲಾಖೆಗೆ ನೆ ನೀಡಲಾಗಿದೆ. ತುರ್ತು ಪರಿಸ್ಥಿತಿಗಳಿಗಾಗಿ ತರಬೇತಿ ಪಡೆದ ಈಜುಗಾರರು ಮತ್ತು ಅನುಭವಿ ಮೀನುಗಾರರನ್ನು ಕರಾವಳಿ ಎಸ್ಪಿ ಗುರುತಿಸಿದ್ದಾರೆ. ಕರಾವಳಿಯುದ್ದಕ್ಕೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಅಪರಿಚಿತ ವ್ಯಕ್ತಿಗಳು ಕಂಡುಬಂದಲ್ಲಿ ವರದಿ ಮಾಡಲು ಅವರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ವಿಪತ್ತು ನಿಯಂತ್ರಣ ಕೊಠಡಿ ಎಚ್ಚರಿಕೆಯಲ್ಲಿವೆ ಮತ್ತು ಅಧಿಕಾರಿ ಮಟ್ಟದಲ್ಲಿ ಹೆಚ್ಚಿನ ಪರಿಶೀಲನೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಮತ್ತು ಜಿಲ್ಲಾ ಅರಣ್ಯಾಧಿಕಾರಿ ಗಣಪತಿ ಉಪಸ್ಥಿತರಿದ್ದರು.