ಕಾಸರಗೋಡು ಡಿ 06: ಮರಳು ಸಾಗಾಟಕ್ಕೆ ಹಲವು ತಂತ್ರಗಳನ್ನು ಹೆಣೆದು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವುದು ನಡಿತಾನೇ ಇದೆ. ಅಕ್ರಮ ಮರುಳು ಸಾಗಾಟಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡರೂ ದಂಧೆಕೋರರು ರಂಗೋಲಿ ಕೆಳಗೆ ತೂರುವ ಪ್ರಯತ್ನ ನಡೆಸ್ತಾನೇ ಇದ್ದಾರೆ. ಇದೀಗ ಅಕ್ರಮವಾಗಿ ಮರಳುಗಳನ್ನು ಸಕ್ಕರೆ ಎಂದು ನಂಬಿಸಿ ಸಾಗಿಸಲು ಮುಂದಾಗಿದ್ದ ಲಾರಿ ಚಾಲಕ ಪೊಲೀಸರ ವಶವಾದ ಘಟನೆ ಡಿ ೬ ಬುಧವಾರ ತ್ರಿಕ್ಕರಿಪುರದಲ್ಲಿ ನಡೆದಿದೆ. ಮಂಗಳೂರಿನಿಂದ ಕಣ್ಣೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಚಂದೇರ ಠಾಣಾ ಪೊಲೀಸರು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಮಿನಿ ಕಂಟೈನರ್ ನಲ್ಲಿ ಸಕ್ಕರೆಯಂತೆ ಬಿಳಿ ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು .ಮೇಲ್ನೋಟಕ್ಕೆ ಸಕ್ಕರೆಯಂತೆ ಗೋಚರಿಸುತ್ತಿತ್ತು.
ಒಟ್ಟು 154 ಗೋಣಿ ಗಳಲ್ಲಿ ಮರಳು ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಲಾರಿ ಚಾಲಕ ಮಂಗಳೂರಿನ ಅಬ್ದುಲ್ ರಹಮಾನ್ ( 28 ) ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.