ಕಾರ್ಕಳ, ಮೇ. 13 (DaijiworldNews/AA): ಮಂಗಳೂರು - ಕಾರ್ಕಳ ನಡುವೆ ಹಾದು ಹೋಗಿರುವ ರಾ. ಹೆ. 169 ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿಯಲ್ಲಿ ಪರಿಸರದಲ್ಲಿ ಬಸ್ಸು ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಮುರತ್ತಂಗಡಿ ಪರಿಸರದಲ್ಲಿದ್ದ ಬಸ್ಸು ತಂಗುದಾಣ ಕೆಡವಿತ್ತು. ಹಲವು ತಿಂಗಳಿನಿಂದ ಎಷ್ಟೇ ಬೇಡಿಕೆ ಕೊಡುತ್ತಿದ್ದರು ಹೊಸ ಬಸ್ ನಿಲ್ದಾಣ ನಿರ್ಮಾಣ ಆಗುವವರೆಗೆ ಕನಿಷ್ಠ ತಾತ್ಕಾಲಿಕವಾಗಿ ಬಸ್ಸು ತಂಗುದಾಣ ನಿರ್ಮಾಣ ಮಾಡಿಲ್ಲ. ಪರಿಣಾಮವಾಗಿ ಗ್ರಾಮಸ್ಥರು ಬೇಸಿಗೆಕಾಲದಲ್ಲಿ ಉರಿ ಬಿಸಿಲಿನಲ್ಲಿಯೇ ಹಾಗೂ ಮಳೆಗಾಲದಲ್ಲಿ ಗಾಳಿ ಮಳೆಯಲ್ಲಿ ಬಸ್ಸಿಗಾಗಿ ಕಾಯುವ ಸ್ಥಿತಿ ಎದುರಾಗಿದೆ.
ಈ ಬಗ್ಗೆ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ತಿಳಿಸಿದರೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಇನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೇಜಾಬ್ದಾರಿತನಕ್ಕೆ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಮಳೆಗಾಲದೊಳಗಾಗಿ ಪರಿಹಾರವಾಗದಿದ್ದರೆ ಹೋರಾಟದ ಹಾದಿ
ಮಳೆಗಾಲದೊಳಗಾಗಿ ಬಸ್ಸು ತಂಗುದಾಣದ ಸ್ಥಳ ಗುರುತಿಸಿ ನಿರ್ಮಾಣ ಕಾರ್ಯ ಆರಂಭ ಮಾಡದಿದ್ದರೆ ಸಾಣೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮದ ಎಲ್ಲಾ ಸಂಘ-ಸಂಸ್ಥೆಗಳು, ಹೆದ್ದಾರಿ ಹೋರಾಟ ಸಮಿತಿ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.