ಬಂಟ್ವಾಳ, ಮೇ. 13 (DaijiworldNews/AA): ಜಮೀನೊಂದರ ದಾರಿ ವಿವಾದದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಇಕ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಫಲ್ಯರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ರಸ್ತೆ ವಿವಾದ ಸಂಬಂಧ ಮಹಿಳೆ ನಡೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಪದ್ಮನಾಭ ಸಫಲ್ಯ ಮನೆ ದಾರಿಗೆ ಗೇಟು ಅಳವಡಿಸಿರುವುದು ಪ್ರಶ್ನಿಸಿದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಸಂಬಂಧ ಮಹಿಳೆ ಪದ್ಮನಾಭ ಸಫಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪದ್ಮನಾಭ ಸಫಲ್ಯ ಅವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಇಕ್ಕಿದು ಗ್ರಾ.ಪಂ. ಉಪಾಧ್ಯಕ್ಷನಾಗಿದ್ದ ಪದ್ಮನಾಭ ಸಫಲ್ಯ ಗೇಟ್ ಹಾಕಿ ದಾರಿ ಬಂದ್ ಮಾಡುವುದನ್ನು ಸ್ಥಳಕ್ಕಾಗಮಿಸಿದ ಮಹಿಳೆ ವಿಡಿಯೋ ಮಾಡುತ್ತಿದ್ದರು. ಈ ಸಂದರ್ಭ ಏಕಾಏಕಿ ಸಿಟ್ಟಾದ ಪದ್ಮನಾಭ ಅಸಭ್ಯವಾಗಿ ವರ್ತಿಸಿದ್ದಾನೆ. ಅಕ್ಕಪಕ್ಕದ ಎರಡು ಮನೆಗಳಿಗೆ ಹೋಗುವ ದಾರಿಯ ಜಾಗದ ತಕರಾರಿನ ಹಿನ್ನೆಲೆ ಈ ರೀತಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಇಕ್ಕಿದು ಗ್ರಾ.ಪಂ.ಉಪಾಧ್ಯಕ್ಷ ಪದ್ಮನಾಭ ಸಫಲ್ಯರನ್ನು ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿಧ್ಯ ಕೊಡುವ ಪಕ್ಷದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಘನತೆ, ಗೌರವ ಹಾಗೂ ವರ್ಚಸ್ಸಿಗೆ ಘಾಸಿ ಉಂಟು ಮಾಡಿರುವ ಕಾರಣಕ್ಕಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.