ಮಂಗಳೂರು,ಮೇ. 14(DaijiworldNews/TA): ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಮಂಗಳವಾರ ಯೂತ್ ಕೇರ್ಗೆ ಚಾಲನೆ ನೀಡಲಾಯಿತು.

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಜ್ ಮಾತನಾಡಿ, ಮಳೆ ಪ್ರವಾಹ, ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ತುರ್ತು ಸ್ಪಂದನೆ ನೀಡುವ ಸಲುವಾಗಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ 'ತುರ್ತು ಸಂದರ್ಭದಲ್ಲಿ ಯುವ ಸ್ಪಂದನೆ' ಎಂಬ ಧ್ಯೇಯದೊಂದಿಗೆ ಯೂತ್ ಕೇರ್ ತಂಡ ಕಾರ್ಯಾಚರಿಸಲಿದ್ದು, ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಇಪ್ಪತ್ತು ಯುವಕರ ತಂಡ ರಚಿಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಯೂತ್ ಕೇರ್ ಲೋಗೋ ಅನಾವರಣಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಕಲ್ಯಾಣ್ ತೇಜಸ್, ಸಹ ಉಸ್ತುವಾರಿ ಅನಿಲ್ ಪಕ್ಷ ಸಂಘಟನೆ, ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್, ಜಿಲ್ಲಾ ಉಪಾಧ್ಯಕ್ಷರುಗಳಾದ ಮೊಹಮ್ಮದ್ ಬಶೀರ್, ವಿನೋಲ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.