ಮಂಗಳೂರು,ಮೇ. 14(DaijiworldNews/TA): ಉಳ್ಳಾಲ ಮತ್ತು ಸೋಮೇಶ್ವರ ಕಡಲ್ಕೊರೆತ ತಡೆ ನಿಟ್ಟಿನಲ್ಲಿ ಬುಧವಾರ ಸ್ಪೀಕರ್ ಯು.ಟಿ.ಖಾದರ್ ಸಭೆ ನಡೆಸಿ ಕಾಮಗಾರಿ ನಡೆಸುವ ವಿಚಾರದಲ್ಲಿ ನ ನಿರ್ಲಕ್ಷ್ಯದ ತಾಳಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೋಟೆಪುರ, ಮೊಗವೀರಪಟ್ಣ, ಸೀಗ್ರೌಂಡ್ ಉಚ್ಚಿಲ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಗಳಾಗಿದ್ದು ಕಾಮಗಾರಿಗೆ ದುಡ್ಡು ಬಿಡುಗಡೆಯಾಗಿ ಆರು ತಿಂಗಳಾದರೆ, ಟೆಂಡರ್ ಆಗಿ ಒಂದೂವರೆ ತಿಂಗಳಾಗಿದೆ. ಆದರೆ ಕೆಲಸ ಇನ್ನೂ ಆರಂಭಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೆಲಸ ಯಾವಾಗ ಆರಂಭಿಸುತ್ತೀರಿ? ಮಳೆ ಶುರುವಾದ ಬಳಿಕ ಕೆಲಸ ಹೇಗೆ ಮಾಡ್ತೀರಾ? ಎಂದು ಪ್ರಶ್ನಿಸಿದರು.

ಬಟ್ಟಪ್ಪಾಡಿಯಲ್ಲಿ ಶಾಶ್ವತ ಕೆಲಸ ನಡೆಯಬೇಕಿದ್ದು ಸ್ಥಳೀಯರು, ಮೀನುಗಾರರೊಂದಿಗೆ ಚರ್ಚಿಸಿ, ಎನ್ಐಟಿಕೆಯನ್ನೂ ಸೇರಿಸಿಕೊಳ್ಳಿ. ಇಲ್ಲಿ ಅರೆಬರೆ ಕೆಲಸ ಮಾಡುವುದು ಬೇಡ, ಹತ್ತು ವರ್ಷ ನೀವು ಏನೂ ಮಾಡಿಲ್ಲ, ಈಗ ಒಮ್ಮೆಲೇ ಎಲ್ಲಾ ಕಡೆ ಕೆಲಸ ಮಾಡ್ತೇವೆ ಎಂದರೆ ಆಗ್ತದಾ? ಯಾವುದಾದರೂ ಒಂದು ಕೆಲಸ ಮರ್ಯಾದೆಯಲ್ಲಿ ಮಾಡಿ. ಕೊಟ್ಟ ಕೆಲಸವನ್ನೇ ಮಾಡಲು ನಿಮಗೆ ಆಗುವುದಿಲ್ಲ. ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ದುಡ್ಡು ಇಟ್ಟು ನೀವು ಯಾರನ್ನು ಸಮಾಧಾನಪಡಿಸಲು ಹೊರಟಿದ್ದೀರಿ? ಅಗತ್ಯ ಇರುವಲ್ಲಿ ಕೆಲಸ ಮುಗಿಸಿ ಎಂದು ಸೂಚನೆ ನೀಡಿದರು. ಕೋಟೆಪುರ ಮೀನುಗಾರಿಕಾ ಜೆಟ್ಟಿ ಏನಾಯಿತು? ನಮ್ಮ ಒತ್ತಡ ಕಡಿಮೆ ಮಾಡಲು ನಿಮ್ಮನ್ನು ತರುವುದು, ಈಗ ನಿಮ್ಮದೇ ಟೆನ್ಷನ್ ಆಗಿದೆ. ನೀವು ಉದ್ಯಮಿಗಳ ಪರವಾಗಿ ಮಾತಾಡಬೇಡಿ, ಎಂದರು.
ಉಳ್ಳಾಲದಲ್ಲಿ ಮೀನು ಗಾರಿಕಾ ಜಟ್ಟಿಯು ಸಣ್ಣ ಮೀನುಗಾರರಿಗಾಗಿ ರೂಪಿಸಿದ ಯೋಜನೆಯಿದು. ಈಗ ಸಣ್ಣ ಯೋಜನೆಯಾದರೂ ಮುಂದಿನ 30 ವರ್ಷಗಳಲ್ಲಿ ದೊಡ್ಡ ಬಂದರ್ ಆಗಿ ಪರಿವರ್ತನೆ ಆಗಲಿದೆ ಎಂದು ತಿಳಿಸಿದರು. ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡುವುದಿಲ್ಲ ಮಂಗಳೂರಿಗೆ ಮುಖ್ಯಮಂತ್ರಿ ಬರಲಿದ್ದು ಜಿಲ್ಲಾಧಿಕಾರಿ ಕಚೇರಿ ಮತ್ತು ಉಳ್ಳಾಲ ಉರುಸ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಉದ್ಘಾಟನೆ ಮುಂದಿನ ಬಾರಿ ನೆರವೇರಿಸಲಿದ್ದಾರೆ. ಉಳ್ಳಾಲಕ್ಕೆ ಸಾವಿರ ಕೋಟಿ ಅನುದಾನ ನೀಡಿದ್ದು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಉಳ್ಳಾಲದ ಜನತೆ ಮಾಡಲಿದ್ದಾರೆ ಎಂದು ಖಾದರ್ ತಿಳಿಸಿದರು.