ಮಂಗಳೂರು, ಮೇ. 15(DaijiworldNews/TA): ಸೆಂಟ್ರಲ್ ರೈಲ್ವೇ ನಿಲ್ದಾಣದ ಪೂರ್ವ ಭಾಗದಲ್ಲಿ ಅತ್ತಾವರ ಕಡೆಗೆ ಸಂಚರಿಸುವ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಇನ್ನೂ ಸರಿಯಾದ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು ನಿಜವಾಗಿಯೂ ಜಿಲ್ಲಾಡಳಿತದ, ಜನ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದಿರುವ ಕೈಗನ್ನಡಿ.

ಅತೀ ಹೆಚ್ಚಾಗಿ ಜನ್ರು ಓಡಾಡುವಂತಹ ರೈಲ್ವೇ ನಿಲ್ದಾಣ ಸಮೀಪದ ರಸ್ತೆಯಲ್ಲಿ ವಾಹನ ದಟ್ಟಣೆ ಸಹಜ ಆದರೆ ಟ್ರಾಫಿಕ್ ಸಿಗ್ನಲ್ ಅಥವಾ ಟ್ರಾಫಿಕ್ ಪೊಲೀಸ್ ಅಳವಡಿಸದೇ ಅಪಘಾತಗಳಿಗೆ ಅಹ್ವಾನ ನೀಡಲಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ. ರಸ್ತೆ ಅಪಘಾತದಿಂದ ಜೀವ ಬಲಿ ಪಡೆದ ನಂತರವೇ ಎಚ್ಚೆತ್ತುಕೊಳ್ಳುವುದು ಜನ ಪ್ರತಿನಿಧಿಗಳಿಗೆ ಮಾಮೂಲಾಗಿ ಹೋಗಿದೆ.
ರಸ್ತೆ ಕಾಮಗಾರಿ, ರಸ್ತೆ ಅಭಿವೃದ್ಧಿಗೆ ಅನುದಾನ ಹಾಕುವುದಲ್ಲ ಕಡೇ ಪಕ್ಷ ಅಪಘಾತ ಸಂಭವನೀಯ ರಸ್ತೆಗಳಲ್ಲಿ ಒಂದು ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡುವ ಬಗ್ಗೆಯೂ ಯೋಚನೆ ಇಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.