ಬಂಟ್ವಾಳ, ಮೇ. 15(DaijiworldNews/TA): ಎಂ.ಡಿ.ಎಂ.ಎ ಮಾದಕ ವಸ್ತು ಸೇವಿಸಿ ಬಳಿಕ ಮಾರಾಟದ ಉದ್ದೇಶದಿಂದ ಅವಿತುಕೊಂಡಿದ್ದ ಮೂವರು ಆರೋಪಿಗಳ ಸಹಿತ ಲಕ್ಷಾಂತರ ರೂ ಮೌಲ್ಯದ ವಿವಿಧ ಸೊತ್ತುಗಳನ್ನು ಬಂಟ್ವಾಳ ನಗರ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ನಂದಾವರ ಬಸ್ತಿಗುಡ್ಡೆ ನಿವಾಸಿ ಮೊಹಮ್ಮದ್ ಇಮ್ತಿಯಾಜ್ , ನಂದಾವರ ಬಸ್ತಿಗುಡ್ಡೆ ನಿವಾಸಿ ಯೂನಸ್, ಹಾಗೂ ಪುತ್ತೂರು ನರಿಮೊಗರು ಪುರುಷರಕಟ್ಟೆ ನಿವಾಸಿ ಮೊಹಮ್ಮದ್ ಇಕ್ಬಾಲ್ ಬಂಧಿತ ಆರೋಪಿಗಳು. ಬಂಧಿತರಿಂದ ರೂ.5000 ಮೌಲ್ಯದ 2.99 ಗ್ರಾಂ ತೂಕದ ಎಂ.ಡಿ.ಎಂ.ಸೊತ್ತು ಹಾಗೂ ಖಾಲಿ 5 ಪ್ಲಾಸ್ಟಿಕ್ ಕವರ್, ರೂ.30 ಲಕ್ಷ ಮೌಲ್ಯದ ಕಾರು, ಆರೋಪಿಗಳ ಕೈಯಲ್ಲಿದ್ದ ರೂ.45 ಸಾವಿರ ಮೌಲ್ಯದ 4 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳ ನಗರ ಠಾಣಾ ಪೋಲೀಸರು ರೌಂಡ್ಸ್ ನಲ್ಲಿದ್ದ ವೇಳೆ ಸಂಶಯದ ಮೇಲೆ ವಿಚಾರಿಸಿದಾಗ ಇವರು ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ನಂದಾವರದ ಗೌಸಿಯಾ ಎಂಬಲ್ಲಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ನಿಷೇಧಿತ ನಿದ್ರಾಜನಕ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದ ವೇಳೆ ಎಸ್.ಐ.ರಾಮಕೃಷ್ಣ ನೇತ್ರತ್ವದಲ್ಲಿ ದಾಳಿ ಮಾಡಿದ್ದಾರೆ. ಈ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.