ನವದೆಹಲಿ ಡಿ 6: ರಾಷ್ಟ್ರ ಮಟ್ಟದ ಹಾಕಿ ಆಟಗಾರ, ಎರಡನೇ ವರ್ಷದ ಕಲಾ ಪದವಿ ಶಿಕ್ಷಣದ ವಿದ್ಯಾರ್ಥಿ ಯಾಗಿರುವ 22ರ ಹರೆಯದ ರಿಜ್ವಾನ್ ಖಾನ್, ಪಶ್ಚಿಮ ದಿಲ್ಲಿಯ ಸುಭಾಶ್ ನಗರ ನಿವಾಸಿಯಾಗಿರುವ, ತನ್ನ ಸ್ನೇಹಿತೆಯ ಮನೆಯ ಎದುರು ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈತನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರು ರಿಜ್ವಾನ್ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆದರೆ ಇದನ್ನೊಪ್ಪದ ಆತನ ಮನೆಯವರು ಇದೊಂದು ಕೊಲೆ ಕೃತ್ಯವೆಂದು ಆರೋಪಿಸಿದ್ದಾರೆ.
ಆದರೆ ಪೊಲೀಸರ ತನಿಖೆಯ ಪ್ರಕಾರ ರಿಜ್ವಾನ್ ಖಾನ್, ಹಾಕಿ ಆಟಗಾರ್ತಿಯಾಗಿರುವ ತನ್ನ ಸ್ನೇಹಿತೆಯನ್ನು ಕಾಣಲು ಮಂಗಳವಾರ ಸಂಜೆ ಆಕೆಯ ಮನೆಗೆ ಹೋಗಿದ್ದಾನೆ; ಅಲ್ಲಿ ಆತ ಆಕೆಯ ಸೋದರ ಸಂಬಂಧಿಯನ್ನು ಭೇಟಿಯಾಗಿದ್ದಾನೆ. ರಿಜ್ವಾನ್ ತನ್ನ ಸ್ನೇಹಿತೆಯ ಮನೆಯಲ್ಲಿ ಹಣ ಹಾಗೂ ತನ್ನ ಸೆಲ್ ಫೋನ್ ಇದ್ದ ಬ್ಯಾಗನ್ನು ಬಿಟ್ಟಿದ್ದಾನೆ. ರಾತ್ರಿ ಸುಮಾರು 10.30ರ ಹೊತ್ತಿಗೆ ಗೆಳತಿಯ ಮನೆ ಮುಂದೆ ನಿಲ್ಲಿಸಿಟ್ಟಿದ್ದ ತನ್ನ ಸ್ವಿಫ್ಟ್ ಕಾರಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ.
ಆದರೆ ರಿಜ್ವಾನ್ ತಂದೆ ಹೇಳುವಂತೆ, ತಾನು ತನ್ನ ಮಗನಿಗೆ ಬೈಕ್ ಕೊಂಡುಕೊಳ್ಳಲೆಂದು 2 ಲಕ್ಷ ರೂ. ನಗದು ರೂಪದಲ್ಲಿ ದುಡ್ಡು ಕೊಟ್ಟಿದೆ. ಬಹಳ ಸಮಯದ ನಂತರ ಮಗನಿಗೆ ಕಾಲ್ ಮಾಡಿದಾಗ ಸ್ವಿಚ್ ಆಪ್ ಸಂದೇಶ ಬರುತ್ತಿತ್ತು. ಇನ್ನೊಂದು ನಂಬರ್ ಗೆ ಕರೆ ಮಾಡಿದಾಗ ಯಾರೋ ಕರೆ ಸ್ವೀಕರಿಸಿ ವಿಳಾಸ ನೀಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಮಾದ್ಯಮಗಳಿಗೆ ಪ್ರ್ತಿಕ್ರಿಯಿಸಿರುವ ಪೊಲೀಸ್ ಡೆಪ್ಯುಟಿ ಕಮಿಶನರ್ ರೋಮಿಲ್ ಬಾನಿಯಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ, ನಾಡ ಪಿಸ್ತೂಲ್ ಆತ್ಮಹತ್ಯೆಗೆ ಬಳಸಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಸೂಕ್ತ ತನಿಖೆ ನಡೆಸಲಿದ್ದೇವೆ ಎಂದಿದ್ದಾರೆ.