ಮಂಗಳೂರು, ಮೇ. 16(DaijiworldNews/AK):ರಾಜ್ಯದ ಪೊಲೀಸರು ದಕ್ಷತೆಯಿಂದ ಸುಹಾಸ್ ಶೆಟ್ಟಿ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೋ ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಪೊಲೀಸ್ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎ ಗೆ ನೀಡಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ಬಜ್ಪೆ ಚಲೋ ಕರೆ ನೀಡಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ, ಪ್ರಕರಣದಲ್ಲಿ ಯಾವೆಲ್ಲಾ ಲಿಂಕ್ ಇದೆಯೋ ಅವುಗಳ ಎಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಎನ್ಐಎ ಗೆ ನೀಡುವ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ನೀಡಿರುವ ಹೇಳಿಕೆಯು ರಾಜಕೀಯ ದುರುದ್ದೇಶ ಹೊಂದಿದೆ ಎಂದು ಅವರು ತಿಳಿಸಿದರು.
ಕುಕ್ಕೆ ಆಡಳಿತ ಮಂಡಳಿ ಆಯ್ಕೆ ಸಮಾಧಾನ ತಂದಿಲ್ಲ
ಇದೇ ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಗೆ ಮಾಜಿ ರೌಡಿಶೀಟರ್ ಹರೀಶ್ ಗೌಡ ಇಂಜಾಡಿ ಅಧ್ಯಕ್ಷನಾಗಿ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸುಹಾಸ್ ಶೆಟ್ಟಿ ಮತ್ತು ಹರೀಶ್ ಇಂಜಾಡಿ ಬೇರೆ ಬೇರೆ ವ್ಯಕ್ತಿತ್ವಗಳು, ಹರೀಶ್ ಮಾಜಿ ರೌಡಿಶೀಟರ್ ಆಗಿರುವುದರಿಂದ ಅವರು ಸುಧಾರಣೆಯಾಗಿರುವ ಸಾಧ್ಯತೆ ಇದೆ. ಒಮ್ಮೆ ರೌಡಿಶೀಟರ್ ಆದವರು ಜೀವನದುದ್ದಕ್ಕೂ ಆದೇ ಆಗಿ ಮುಂದುವರಿಯಬೇಕು ಅಂತೇನೂ ಇಲ್ಲವಲ್ಲ, ರೌಡಿಶೀಟರ್ ಗಳು ಸಂಪೂರ್ಣವಾಗಿ ಬದಲಾಗಿ ಮೂಲವಾಹಿನಿಗೆ ಬರಲು ಪ್ರಯತ್ನಿಸಿದರೆ ತಡೆಯಲಾದೀತೇ ಎಂದು ಹೇಳುವ ದಿನೇಶ್ ಗುಂಡೂರಾವ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ತನಗೂ ಸಮಾಧಾನ ತಂದಿಲ್ಲ ಎಂದು ದ್ವಂದ್ವ ನಿಲುವು ವ್ಯಕ್ತಪಡಿಸಿದರು.