ಬಂಟ್ವಾಳ, ಮೇ. 17 (DaijiworldNews/AA): ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ನಾಲ್ವರ ತಂಡವೊಂದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗಾಯಗೊಂಡ ಯುವಕನನ್ನು ಅಕ್ಕರಂಗಡಿ ನಿವಾಸಿ ಹಮೀದ್ ಯಾನೆ ಅಮ್ಮಿ ಎಂದು ಗುರುತಿಸಲಾಗಿದೆ. ಹಮೀದ್ ಅವರು ಪೈಂಟಿಂಗ್ ವೃತ್ತಿ ನಿರ್ವಹಿಸುತ್ತಿದ್ದರು.
ಹಮೀದ್ ಅವರು ರಸ್ತೆ ಬದಿ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ನಾಲ್ವರ ತಂಡ ದಾಳಿ ನಡೆಸಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಶಾಂತ ಸ್ಥಿತಿಗೆ ಮರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಘಟನೆ ಮತ್ತೆ ಆತಂಕ ಮೂಡಿಸಿದೆ. ದಾಳಿ ಯಾರು ನಡೆಸಿದ್ದಾರೆ, ಕಾರಣವೇನು ಎಂಬುದು ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿರುವ ಹಮೀದ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.