ಬಂಟ್ವಾಳ, ಮೇ. 17 (DaijiworldNews/AA): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಬಂಟ್ವಾಳ ಮತ್ತು ವಿಟ್ಲ ವ್ಯಾಪ್ತಿಯ ಒಟ್ಟು 580 ಅಂಗನವಾಡಿ ಕೇಂದ್ರಗಳ ಈ ಸಾಲಿನ ಚಟುವಟಿಕೆಗಳು ಕಾರ್ಯಾರಂಭಗೊಂಡಿವೆ.



ಬಂಟ್ವಾಳ ಸಿಡಿಪಿಒ ಮಮ್ತಾಜ್ ಅವರು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಮಕ್ಕಳನ್ನು ಸ್ವಾಗತಿಸುವ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳನ್ನು ಸಿಂಗರಿಸಿ. ಅಂದವಾಗಿ ವಿನ್ಯಾಸಗೊಳಿಸಲಾಗಿತ್ತು.
ಬಂಟ್ವಾಳದ ಬಿ.ಸಿ.ರೋಡ್ ನಲ್ಲಿ ಡೇ ಕೇರ್ ಮಾದರಿಯಲ್ಲಿ 'ಕಂ ಕ್ರಶ್' ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇಲ್ಲಿ ಉದ್ಯೋಗಸ್ಥ ತಾಯಂದಿರು ತಮ್ಮ ಶಿಶುಗಳನ್ನು ಇಲ್ಲಿ ಬೆಳಗ್ಗೆ ಬಿಟ್ಟುಹೋಗುವ ಸೌಲಭ್ಯವಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಅಂಗನವಾಡಿ ಕೇಂದ್ರಗಳು ತೆರೆದಿರುತ್ತವೆ.
ವಿಟ್ಲ ವ್ಯಾಪ್ತಿಯಲ್ಲಿ 229 ಹಾಗೂ ಬಂಟ್ವಾಳ ವ್ಯಾಪ್ತಿಯಲ್ಲಿ 341 ಕೇಂದ್ರಗಳು ಕಾರ್ಯಚಟುವಟಿಕೆ ನಡೆಸುತ್ತಿವೆ. ಪೂರಕ ಪೌಷ್ಠಿಕ ಆಹಾರದಡಿ ಮೊಟ್ಟೆ, ಹಾಲು, ಉಪ್ಪಿಟ್ಟು, ಅನ್ನ, ಪಾಯಸ ಸಹಿತ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ನೀಡಲಾಗುತ್ತಿದೆ.
ಗರ್ಭಿಣಿಯರು ಮತ್ತು ಶಿಶುವಿಗೆ ಹಾಲುಣಿಸುವ ತಾಯಂದಿರಿಗೂ ಹಾಲು, ಮೊಟ್ಟೆ, ಹೆಸರುಕಾಳು, ಅಕ್ಕಿ ಮತ್ತು ಸಾಂಬಾರ್ ಹುಡಿಯನ್ನು ನೀಡಲಾಗುತ್ತಿದೆ. ಮಾತೃವಂದನಾ ಯೋಜನೆಯಡಿ ಮೊದಲ ಗರ್ಭಾವಸ್ಥೆ ವೇಳೆ 5 ಸಾವಿರ ರೂ. ನೀಡಲಾಗುತ್ತಿದ್ದು, ಎರಡನೇ ಗರ್ಭಾವಸ್ಥೆಯಲ್ಲಿ ಹೆಣ್ಣು ಮಗು ಹುಟ್ಟಿದರೆ, 6 ಸಾವಿರ ರೂ ನೀಡಲಾಗುತ್ತಿದೆ.
ಭಾಗ್ಯಲಕ್ಷ್ಮೀ, ಪೋಷಣ್ ಅಭಿಯಾನ್ ಯೋಜನೆ ಸಹಿತ ಹಲವು ಯೋಜನೆಗಳಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಸಿಡಿಪಿಒ ಮಮ್ತಾಜ್ ತಿಳಿಸಿದರು. ಈ ಸಂದರ್ಭ ಸಿಡಿಪಿಒ ಕಚೇರಿ ಸಿಬ್ಬಂದಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಸಿಬಂದಿ ಉಪಸ್ಥಿತರಿದ್ದರು.