ಮಂಗಳೂರು, ಮೇ. 17 (DaijiworldNews/AA): ಜಮ್ಮು-ಕಾಶ್ಮೀರದ ಪೆಹಲ್ಗಾಮ್ನಲ್ಲಿ ಏಪ್ರಿಲ್ 22ರಂದು 26 ಮಂದಿ ಅಮಾಯಕ ಪ್ರವಾಸಿಗರನ್ನು ಹತ್ಯೆಮಾಡಿದ ಬರ್ಬರ ಕೃತ್ಯಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ 'ಆಪರೇಷನ್ ಸಿಂಧೂರ' ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಮೇ20ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ನಗರದ ಪಿವಿಎಸ್ ವೃತ್ತದಿಂದ ಕರಾವಳಿ ಉತ್ಸವ ಮೈದಾನದವರೆಗೆ ಮೆರವಣಿಗೆ ಮತ್ತು ಸಂಜೆ 5ಗಂಟೆಗೆ ಕಾರ್ಯಕ್ರಮ ಜರುಗಲಿದೆ.


ಸಿಂಧೂರ ವಿಜಯೋತ್ಸವ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವು, ನಮ್ಮ ಭಾರತೀಯ ಸೇನಾ ಯೋಧರ ಶೌರ್ಯ, ಪರಾಕ್ರಮಗಳನ್ನು ಗೌರವಿಸುವ ಜೊತೆಗೆ, ಅನ್ಯಾಯ, ಬರ್ಬರತೆಗಳನ್ನು ಸದೆ ಬಡಿಯುವ ದೇಶದ ಶಕ್ತಿ, ಸಾಮರ್ಥ್ಯ ಹಾಗೂ ದೃಢಸಂಕಲ್ಪ ಶಕ್ತಿಯನ್ನೂ ವಿಶ್ವದ ಎದುರು ತೆರೆದಿಟ್ಟಿದೆ. ಸಹನೆಗೂ ಒಂದು ಮಿತಿಯಿದ್ದು, ಬದಲಾದ ಭಾರತದ ಶಕ್ತಿಯನ್ನು ಪ್ರದರ್ಶಿಸಿದೆ.
ಏಪ್ರಿಲ್ರಂ22ದು ಪೆಹಲ್ಗಾಮ್ನಲ್ಲಿ ನಡೆದ ಘೋರ ಕೃತ್ಯದ ಹಿಂದೆ ಪಾಕಿಸ್ತಾನದ ಸೇನೆ, ಐಎಸ್ಐ ಹಾಗೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾ ಮತ್ತು ಅದರ ಛಾಯಾ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ನ ಪಾತ್ರ ಇರುವುದು ಕಂಡುಬಂದ ಬಳಿಕ, ಭಾರತ, ಇಂತಹ ಪೈಶಾಚಿಕ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿತು. ನಮ್ಮ ತಾಯಂದಿರು, ಸಹೋದರಿಯರ ಸಿಂಧೂರ ಅಳಿಸಿದವರಿಗೆ 'ಆಪರೇಷನ್ ಸಿಂಧೂರ' ಮೂಲಕ ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ತೀರ್ಮಾನಿಸಿತು.
ಅದರಂತೆ ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಭಾರೀ ಹೊಡೆತ ನೀಡಿತು. ಶಿಮ್ಲಾ ಒಪ್ಪಂದ ರದ್ದುಗೊಳಿಸಿದ ಪಾಕಿಸ್ತಾನದ ಕ್ರಮವನ್ನೇ ಬಳಸಿಕೊಂಡು ಭಾರತ ಈ ತೀರ್ಮಾನ ಕೈಗೊಳ್ಳುವ ಮೂಲಕ ಪಾಕಿಸ್ತಾನದ ಆರ್ಥಿಕತೆಗೆ ಮರ್ಮಾಘಾತವನ್ನುಂಟು ಮಾಡಿತು. ಅನಂತರ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಕೃತ್ಯಗಳಿಂದ ಭಾರತಕ್ಕೆ ಆಗುತ್ತಿರುವ ಅನ್ಯಾಯಾಗಳ ಬಗ್ಗೆ ವಿಶ್ವಕ್ಕೆ ಅರಿವು ಮೂಡಿಸಿತು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯನ್ನಾಗಿಸಿತು. ಭಾರತೀಯ ಸೇನಾಪಡೆಗಳಿಗೆ ಮುಂದಿನ ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಪೂರ್ಣ ಸಹಕಾರ ನೀಡಿದರು.
ಇನ್ನೊಂದೆಡೆ, ಮೇ 7ರಂದು ಮಧ್ಯ ರಾತ್ರಿ ಭಾರತೀಯ ಪಡೆಗಳು ಪಾಕಿಸ್ತಾನದಲ್ಲಿ ಇರುವ ಭಯೋತ್ಪಾದಕ ನೆಲೆಗಳ ಮೇಲೆ ವ್ಯಾಪಕ ದಾಳಿ ನಡೆಸಿ ಅವುಗಳನ್ನು ನಾಶಗೊಳಿಸಿದವು. ಕೇವಲ 23ನಿಮಿಷಗಳ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರನ್ನು ಹತ್ಯೆ ಮಾಡಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ಗಡಿಪ್ರದೇಶಗಳ ಮೇಲೆ ನೂರಾರು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ಯತ್ನಿಸಿತಲ್ಲದೆ, ಶೆಲ್ ದಾಳಿಯ ಮೂಲಕ ಹತ್ತಾರು ನಾಗರಿಕರನ್ನು ಬಲಿತೆಗೆದುಕೊಂಡಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಪಡೆಗಳು ಪಾಕಿಸ್ತಾನದ ಎಲ್ಲಾ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ವಿಫಲಗೊಳಿಸಿದವಲ್ಲದೆ, ಈ ದಾಳಿಗಳನ್ನು ನಡೆಸಿದ ಪಾಕಿಸ್ತಾನದ ಸೇನಾನೆಲೆಗಳ ಮೇಲೆಯೇ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿದವು.
ಈ ಸಂದರ್ಭ, ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ಕೇಂದ್ರ ಶಿಬಿರಗಳನ್ನು ಮತ್ತು 8 ಸೇನಾನೆಲೆಗಳನ್ನು ನಾಶಗೊಳಿಸಲಾಯಿತು. ಭಾರತದ ದಾಳಿಯಲ್ಲಿ ಯಾವುದೇ ನಾಗರಿಕರ ಜೀವ ಹಾನಿಯಾಗದಂತೆನೋಡಿಕೊಳ್ಳಲಾಗಿತ್ತು ಮತ್ತು ಅತ್ಯಂತ ನಿಖರವಾಗಿ ಭಯೋತ್ಪಾದಕ ಕೇಂದ್ರಗಳನ್ನೇ ಗುರಿಯಾಗಿಸಲಾಯಿತು. ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರಲ್ಲದೆ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಂಬ ಇಬ್ಬರು ಮಹಿಳಾ ಸೇನಾಧಿಕಾರಿಗಳ ಮೂಲಕ ಭಾರತದ 'ಆಪರೇಷನ್ ಸಿಂಧೂರ'ದ ಯಶೋಗಾಥೆಯನ್ನು ತಿಳಿಸಲಾಯಿತು. ಈ ಮೂಲಕ ಭಾರತ ತನ್ನ ಸಭ್ಯತೆ ಮತ್ತುನಿಲುವು ಏನೆಂಬುದನ್ನು ವಿಶ್ವಕ್ಕೆ ಸಾರಿ ಹೇಳಿತಲ್ಲದೆ, ನಮ್ಮ ಸಹೋದರಿಯರ 'ಸಿಂಧೂರ'ವನ್ನು ಉಳಿಸುವ ಸಾಮರ್ಥ್ಯ ನಮಗೆ ಇದೆ ಎಂಬುದನ್ನು ತೋರಿಸಿ ಕೊಟ್ಟಿತು. ಇದರಿಂದ ಬೆದರಿದ ಪಾಕಿಸ್ತಾನ ಕದನವಿರಾಮಕ್ಕೆ ಮೊರೆಯಿಟ್ಟು, ಪಾಕಿಸ್ತಾನಿ ಸೇನಾ ಡಿಜಿಎಂಒ ಮತ್ತು ಭಾರತೀಯಡಿ ಜಿಎಂಒ ಅವರ ನಡುವಣ ಮಾತುಕತೆಯಂತೆ ಕದನವಿರಾಮ ಘೋಷಣೆಯಾಯಿತು.
ಈ ಸಂದರ್ಭದಲ್ಲಿ ಭಾರತೀಯ ಸೇನಾಪಡೆಗಳು ಮತ್ತು ಯೋಧರ ಉದಾತ್ತ ಶೌರ್ಯ-ಪರಾಕ್ರಮವನ್ನು ಅಭಿನಂದಿಸಿ ಅವರಿಗೆ ಬೆಂಬಲ ನೀಡಿ ಗೌರವಿಸುವ ನಿಟ್ಟಿನಲ್ಲಿ ಈ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಉತ್ತಮ ಸಂದೇಶವನ್ನು ನೀಡಬೇಕಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಗುರುದತ್ತ ನಾಯಕ್, ಕೇಶವನಂದೋಡಿ, ಸಿಎ ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು.