ಮಂಗಳೂರು, ಜೂ20(Daijiworld News/SS): ವಿಧಾನಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
2018ರ ಏ.15ರಂದು ದಶಮಾನೋತ್ಸವ ಸಮಾರಂಭದ ಅಂಗವಾಗಿ ವಿಶ್ವ ಹಿಂದು ಪರಿಷತ್ ಭಜರಂಗದಳ ಶ್ರೀಧರ್ಮಶಾಸ್ತ ಶಾಖೆ ಕಜೆ ಪದವು ಬಜಪೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ತುಳು ಭಾಷೆಯಲ್ಲಿ ಭಾಷಣ ಮಾಡಿದ್ದರು. ಇದು ಪ್ರಚೋದನಕಾರಿ ಭಾಷಣ ಎಂದು ಆಕ್ಷೇಪಿಸಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಗಿರೀಶ್ ಶೆಟ್ಟಿಗಾರ್ ಅವರು ಬಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣ ರದ್ದುಪಡಿಸಲು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿಯನ್ನು ಜೂ.19ರಂದು ನ್ಯಾಯಮೂರ್ತಿ ಪಿ.ಎಸ್. ದಿನೇಶ್ಕುಮಾರ್ ಅವರಿದ್ದ ಪೀಠ ಮಾನ್ಯ ಮಾಡಿದ್ದು, ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.