ಕಾರ್ಕಳ, ಜೂ 20 (Daijiworld News/SM): ಲಾರಿಯೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿದ್ದ ಕಾರು ಅಫಘಾತಕ್ಕೀಡಾಗಿ ಸಂಪೂರ್ಣವಾಗಿ ನಜ್ಜುಗುಜ್ಜಾದ ಘಟನೆ ನಗರದ ಪುಲ್ಕೇರಿ ಜಂಕ್ಷನ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ.
ಹಿರಿಯಡ್ಕದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರು ಅಪಘಾತದಲ್ಲಿ ಸಂಪೂರ್ಣ ಹಾನಿಗೊಳ್ಳಗಾಗಿದೆ. ಅದರ ಚಾಲಕ ಹಿರಿಯಡ್ಕದ ನಿತೀಶ್ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿದೆ.
ಕಾರ್ಕಳದಿಂದ ಪುಲ್ಕೇರಿ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಕಾರು ಮುನ್ನುಗ್ಗುತ್ತಿದ್ದಂತೆ ಬೆಂಗಳೂರಿನಿಂದ ಉಡುಪಿ ಕಡೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಎದುರಾಗಿದೆ. ಆ ಸಂದರ್ಭದಲ್ಲಿ ಕಾರು ಮುನ್ನುಗ್ಗಲು ವಿಫಲಗೊಂಡು ಲಾರಿಯ ಬಲ ಬದಿಗೆ ಡಿಕ್ಕಿ ಹೊಡೆದು ಬಸ್ಸಿನ ಮಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಲಾರಿಯ ಡಿಸೇಲ್ ಟ್ಯಾಂಕ್ ಸಂಪೂರ್ಣ ಹಾನಿಗೊಳ್ಳಗಾಗಿದೆ.
ಘಟನಾ ಸ್ಥಳಕ್ಕೆ ಅಗಮಿಸಿದ ಪೊಲೀಸರ ನೆರವಿನಿಂದ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.