ಕುಂದಾಪುರ ಡಿ 06: ಇನ್ನು ಕೆಲವೇ ತಿಂಗಳಲ್ಲಿ ಎದುರಾಗುವ ವಿಧಾನ ಸಭಾ ಚುನಾವಣೆಗೆ ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಹೆಸರು ಇತ್ತೀಚೆಗೆ ಬಹಳ ಪ್ರಚಾರದಲ್ಲಿತ್ತು. ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ ಮಲ್ಲಿ ಕುಂದಾಪುರದಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಆದರೆ ಸ್ಥಳೀಯ ಕಾಂಗ್ರೆಸ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎನ್ನುತ್ತಿದ್ದರು. ಆದರೆ ಈಗ ಸ್ವತಃ ರಾಕೇಶ ಮಲ್ಲಿ ಅವರೇ ಈ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ.
ಡಿ.5 ರಂದು ಕುಂದಾಪುರದಲ್ಲಿ ದಾಯ್ಜಿ ವರ್ಲ್ಡ್ ಜೊತೆ ಮಾತನಾಡಿದ ರಾಕೇಶ್ ಮಲ್ಲಿ ನಾನು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಕಳೆದ 6 ತಿಂಗಳಿಂದ ಇಂಟೆಕ್ ರಾಜ್ಯ ಅಧ್ಯಕ್ಷನಾಗಿದ್ದೇನೆ. ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಅವಕಾಶ ಸಿಕ್ಕರೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ. ಇಲ್ಲಿನ ಪಕ್ಷದ ನಾಯಕರು, ಕಾರ್ಯಕರ್ತರು, ಜನರ ಸಹಕಾರ ನೀಡಿದರೆ ಸ್ಪರ್ಧೆ ಮಾಡಲಿದ್ದೇನೆ. ಎಲ್ಲರ ಸಹಕಾರ ಬೇಕಾಗಿದೆ ಎಂದಿದ್ದಾರೆ.
ರಾಕೇಶ ಮಲ್ಲಿ ಅವರ ಚುನಾವಣಾ ಸ್ಪರ್ಧೇಯ ಪೂರ್ವಭಾವಿಯಾಗಿ ಇದೇ 9 ರಂದು ಕುಂದಾಪುರದಲ್ಲಿ ಇಂಟೆಕ್ ಸಮಾವೇಶ ಹಮ್ಮಿಕೊಳ್ಳಲಿದ್ದಾರೆ. ಕುಂದಾಪುರಕ್ಕೆ ಮಲ್ಲಿ ಅಧಿಕೃತ ಎನ್ನುವುದನ್ನು ತೋರ್ಪಡಿಸುವುದು ಕೂಡಾ ಈ ಸಮಾವೇಶ ಉದ್ದೇಶ ಎನ್ನಲಾಗುತ್ತಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ಇಂಟೆಕ್ ಸಮಾವೇಶ ಡಿಸೆಂಬರ್ 9 ಶನಿವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ಆರ್.ಎನ್.ಶೆಟ್ಟಿ ಹಾಲ್ನಲ್ಲಿ ನಡೆಯಲಿದೆ. ಸಮಾವೇಶವನ್ನು ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡೀಸ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಮಾವೇಶದಲ್ಲಿ ಸಚಿವ ಪ್ರಮೋದ್ ಮಧ್ವರಾಜ್, ಗಣಿ ಮತ್ತು ಭೂಸ್ವಾಧಿನ ಸಚಿವ ವಿನಯ ಕುಲಕರ್ಣಿ, ಶಾಸಕ ಕೆ.ಗೋಪಾಲ ಪೂಜಾರಿ, ವಿನಯಕುಮಾರ್ ಸೊರಕೆ,ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ ಮಲ್ಲಿ, ಇಂಟೆಕ್ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರ ಅಮೀನ್, ಯುವ ಇಂಟೆಕ್ ಅಧ್ಯಕ್ಷ ಅಜಿತ್ ಶೆಟ್ಟಿ ತಿಳಿಸಿದ್ದಾರೆ.
ಇಂಟೆಕ್ ಬೇಡಿಕೆ ಕುಂದಾಪುರ?
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಐದು ಸ್ಥಾಗಳನ್ನಾದರೂ ಇಂಟೆಕ್ಗೆ ಬಿಟ್ಟುಕೊಡಬೇಕು ಎಂದು ಇಂಟೆಕ್ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದ್ದು ಕನಿಷ್ಠ ಒಂದು ಸ್ಥಾನವಾದರೂ ಇಂಟೆಕ್ಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂಟೆಕ್ ರಾಜ್ಯಾಧ್ಯಕ್ಷರ ನೆಲೆಯಲ್ಲಿ ರಾಕೇಶ್ ಮಲ್ಲಿ ವಿಧಾನಸಭೆಗೆ ಸ್ಪರ್ಧಿಸುವ ಸ್ಥಾನ ಪಡೆಯಲಿದ್ದಾರೆ. ಆದರೆ ಕ್ಷೇತ್ರ ಯಾವುದು ಎನ್ನುವುದು ಪ್ರಮುಖ ಪ್ರಶ್ನೆ ಆಗಿದೆ. ಇದಕ್ಕೆ ಉತ್ತರವೂ ಸಿಕ್ಕಿದ್ದು ಅದು ಕುಂದಾಪುರ ಎನ್ನಲಾಗುತ್ತಿದೆ.