ಬೆಳ್ತಂಗಡಿ, ಜೂ21(Daijiworld News/SS): ವಿಶ್ವದಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರತೀಯ ಪರಂಪರೆ ಹಾಗೂ ಆರೋಗ್ಯಪೂರ್ಣ ಸಂಪ್ರದಾಯದ ರಾಯಭಾರಿಯಂತಿರುವ ಯೋಗ ದಿನಾಚರಣೆ ವಿಶಿಷ್ಟ ರೀತಿಯಲ್ಲಿ ಹಬ್ಬದಂತೆ ನಡೆಯುತ್ತಿದೆ.
ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಯೋಗ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಹಾಗೂ ಶಾಂತಿವನ ಟ್ರಸ್ಟ್ ವತಿಯಿಂದ ಧರ್ಮಸ್ಥಳದಲ್ಲಿ 5ನೇ ವಿಶ್ವ ಯೋಗ ದಿನಾಚರಣೆ ನಡೆದಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಯೋಗವನ್ನು ಆಯೋಜಿಸಲಾಗಿತ್ತು.
ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಉದ್ಘಾಟಿಸಿದರು. ಸಭಾಭವನದಲ್ಲಿ ಒಂದು ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಎಸ್.ಡಿ.ಎಂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿನಿಧಿಗಳು, ಎಸ್.ಡಿ.ಎಂ .ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಈ ವೇಳೆ ಗಿನ್ನೆಸ್ ದಾಖಲೆ ಬರೆದ ಯೋಗ ಪ್ರತಿಭೆ ತನುಶ್ರೀ ಪಿತ್ರೋಡಿ ಅವರಿಗೆ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.