ಉಡುಪಿ, ಜೂ 21 (Daijiworld News/MSP): 'ಸರ್ಕಾರ ಶವವಾಗಿ ಹೋಗಿದ್ದು ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುವ ಸ್ಥಿತಿಯಲ್ಲೇ ಇಲ್ಲ' ಈ ವಿಚಾರವೂ ’ಮಧ್ಯಂತರ ಚುನಾವಣೆ ಖಚಿತ ’ ಎಂಬ ದೇವೇಗೌಡರ ಹೇಳಿಕೆಯಿಂದ ಸಾಬೀತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಶುಕ್ರವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ವಿಶ್ವನಾಥ್ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರಕ್ಕೆ ರಾಜ್ಯದ ರೈತರ ಸಮಸ್ಯೆ ಬೇಡ, ಬರ, ನೆರೆಯ ನಿರ್ವಹಣೆ ಬೇಡವಾಗಿದೆ. ಈ ಎಲ್ಲಾ ಲೋಪಗಳನ್ನು ಮರೆಮಾಚಲು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಮೊರೆ ಹೋಗಿದ್ದಾರೆ. ವಿಧಾನಸೌಧಕ್ಕೆ ಒಬ್ಬನೇ ಒಬ್ಬ ಮಂತ್ರಿ ಹೋಗಲ್ಲ. ಇಷ್ಟು ಮಾತ್ರವಲ್ಲದೆ ಮಂತ್ರಿಗಳು ಜಿಲ್ಲಾ ಕೇಂದ್ರಕ್ಕೆ ಹೋಗೋದಿಲ್ಲ ಎಂದು ಆರೋಪಿಸಿದರು.
"ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಲೆಂದು ಈ ಸರ್ಕಾರ ರಚನೆಯಾಗಿದೆ , ಬಹಳ ದಿನ ಈ ಸರ್ಕಾರ ಬಾಳೋದಿಲ್ಲ" ದೇವೇಗೌಡರ ಹೇಳಿಕೆಯಿಂದ ಇದು ಸಾಬೀತಾಗಿದೆ. ಬಿಜೆಪಿ ಈ ಎಲ್ಲಾ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಬಿಜೆಪಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾಕೆಂದರೆ ಶಾಸಕರು ಐದು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ. ಚುನಾವಣೆ ಮುಗಿದು ಈಗಷ್ಟೇ ಒಂದೇ ವರ್ಷ ಆಗಿದೆ. ಉಳಿದ ನಾಲ್ಕು ವರ್ಷಕ್ಕೆ ಚುನಾವಣೆ ಬೇಡ ಯಾಕೆಂದರೆ ಚುನಾವಣೆಯ ಮನೋಸ್ಥಿತಿಯಲ್ಲಿ ಯಾವ ಶಾಸಕರು ಇಲ್ಲ. ಆದರೆ ದೇವೇಗೌಡ ಮನೋಸ್ಥಿತಿ ಏನಿದೆ ಗೊತ್ತಿಲ್ಲ. ಕರ್ನಾಟಕದ ಜನತೆ ಕೂಡಾ ಈ ಸರ್ಕಾರ ಉರುಳೋದನ್ನು ಕಾಯುತ್ತಿದ್ದಾರೆ ಎಂದರು.