ಮಂಗಳೂರು, ಜೂ 21 (Daijiworld News/MSP): ಪ್ರತಿ ಶುಕ್ರವಾರ ನಡೆಯುವ ಪೊಲೀಸ್ ಫೋನ್-ಇನ್ ಕಾರ್ಯಕ್ರಮದಲ್ಲಿ ಮೀನು ಲಾರಿಗಳ ತ್ಯಾಜ್ಯ ನೀರು ರಸ್ತೆಗೆ ಬಿದ್ದು ವಾಸನೆ ಬರುತ್ತಿರುವ ಬಗ್ಗೆ ಪದೇಪದೇ ದೂರುಗಳು ಬರುತ್ತಿದ್ದವು.
ಈ ಹಿನ್ನೆಲೆಯಲ್ಲಿ ಕಮಿಷನರ್ ಮೀನು ಲಾರಿ ಮಾಲಕರ ಸಭೆ ಕರೆದು ಖಡಕ್ ಎಚ್ಚರಿಕೆ ನೀಡಿದ್ದರು. ಅಲ್ಲದೆ ಹಸಿರು ಪೀಠದ ಆದೇಶದಲ್ಲಿ ತಿಳಿಸಿರುವಂತೆ ಮೀನಿನ ಲಾರಿಗಳ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ರಸ್ತೆಗೆ ಬೀಳಬಾರದು, ಮೀನುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ರವಾನೆ ಮಾಡುವಾಗ ಕ್ರೇಟ್ ಬಳಸಬೇಕು. ಮಂಜುಗಡ್ಡೆ ನೀರು ಕೆಳಗೆ ಬೀಳುವಂತಿಲ್ಲ. ಒಂದು ಟನ್ ಮೀನು ಸಾಗಾಟ ಮಾಡುವ ವಾಹನದಲ್ಲಿ 50 ಲೀಟರ್ ತ್ಯಾಜ್ಯ ನೀರು ಸಂಗ್ರಹಕ್ಕೆ ಟ್ಯಾಂಕ್ ಹೊಂದಿರಬೇಕು ಎಂದು ಆದೇಶ ನೀಡಿದ್ದರು.
ತ್ಯಾಜ್ಯ ಸೋರಿಕೆಯಾಗುವ ವಾಹನಗಳ ವಿರುದ್ದ ಕಮಿಷನರ್ ಡಾ.ಸಂದೀಪ್ ಪಾಟೀಲ್ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಿಯಮ ಮೀರಿ ಸಾಗಾಟ ಮಾಡಿದ ಹಲವು ವಾಹನಗಳಿಗೆ ಪೊಲೀಸ್ ಇಲಾಖೆ ದಂಡ ವಿಧಿಸಿತ್ತು.
ಇದೀಗ ಜೂ 21 ಶುಕ್ರವಾರದಂದು ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಿಷನರ್ ಡಾ.ಸಂದೀಪ್ ಪಾಟೀಲ್ , ಮೀನು ಸಾಗಾಟದ ವಾಹನದ ಟ್ಯಾಂಕ್ ಅಳವಡಿಕೆಗೆ ಅಂತಿಮ ಗಡುವು ವಿಧಿಸಿದ್ದಾರೆ.
" ಮೀನು ಸಾಗಾಟದ ವಾಹನಗಳಲ್ಲಿನ ತ್ಯಾಜ್ಯ ನೀರು ರಸ್ತೆಯುದ್ದಕ್ಕೂ ಚೆಲ್ಲುತ್ತಿರುವುದರ ವಿರುದ್ಧ ನಿಗಾ ವಹಿಸಿರುವ ಪೊಲೀಸ್ ಇಲಾಖೆ ಈಗಾಗಲೇ ವಾಹನಗಳಿಗೆ ನೀರು ಸಂಗ್ರಹಕ್ಕೆ ಟ್ಯಾಂಕ್ ಅಳವಡಿಸಲು ಸೂಚಿಸಲಾಗಿದೆ. ಈಗಾಗಲೇ 63 ಮೀನು ಸಾಗಾಟದ ವಾಹನಗಳಲ್ಲಿ ಈ ಟ್ಯಾಂಕ್ಗಳನ್ನು ಅಳವಡಿಸಲಾಗಿದೆ. ಈಗ ಇರುವ ಮೀನುಗಾರಿಕೆ ನಿಷೇಧ ಅವಧಿ ಮುಗಿಯುವುದರೊಳಗೆ ಎಲ್ಲಾ ವಾಹನಗಳೂ ಕಡ್ಡಾಯವಾಗಿ ಈ ಟ್ಯಾಂಕ್ಗಳನ್ನು ಅಳವಡಿಸಬೇಕು ಎಂದು ತಿಳಿಸಿದ್ದಾರೆ.