ಕಾಸರಗೋಡು, ಜೂ 21 (Daijiworld News/SM): ಮಂಜೇಶ್ವರ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ರವರ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ರಾಜ್ಯ ಹೈಕೋರ್ಟ್ ನಲ್ಲಿ ಹೂಡಿದ್ದ ದಾವೆಯನ್ನು ಹಿಂದಕ್ಕೆ ಪಡೆದಿದ್ದು, ಶೀಘ್ರ ಉಪಚುನಾವಣೆ ನಡೆಯಲಿದೆ.
ದಾವೆಯನ್ನು ಹಿಂದಕ್ಕೆ ಪಡೆಯುವುದಾಗಿ ಕೆ. ಸುರೇಂದ್ರನ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರದದು ಇತ್ಯರ್ಥಗೊಳಿಸಲಾಗಿದೆ. ತೀರ್ಪು ಹೊರ ಬೀಳುವುದರೊಂದಿಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರವು ಉಪಚುನಾವಣೆಗೆ ಸಾಕ್ಷಿಯಾಗುತ್ತಿದೆ. ಪ್ರಕರಣ ವಿಚಾರಣೆಗೆ ವೆಚ್ಚವಾದ 42 ಸಾವಿರ ರೂಪಾಯಿಗಳನ್ನು ಕಟ್ಟುವಂತೆ ಹೈಕೋರ್ಟ್ ಕೆ. ಸುರೇಂದ್ರನ್ ಗೆ ಆದೇಶ ನೀಡಿದೆ.
2016 ರ ಮೇ ತಿಂಗಳಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಘಟಕ ಪಕ್ಷವಾದ ಮುಸ್ಲಿಂ ಲೀಗ್ ನ ಪಿ.ಬಿ. ಅಬ್ದುಲ್ ರಜಾಕ್ ಕೇವಲ 89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮತದಾನದಲ್ಲಿ ಅಕ್ರಮ ನಡೆದಿದೆ. ಮುಸ್ಲಿಂ ಲೀಗ್ ನಕಲಿ ಮತ ಚಲಾಯಿಸಿ ಗೆಲುವು ಸಾಧಿಸಿದೆ. ಹಾಗಾಗಿ ತನ್ನನ್ನು ವಿಜಯಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಸುರೇಂದ್ರನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ನಡುವೆ ನ್ಯಾಯಾಲಯದಲ್ಲಿ ವಿಚಾರಣೆ 2018ರ ಅಕ್ಟೊಬರ್ 20ರಂದು ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ನಿಧನರಾಗಿದ್ದರು. ನಕಲಿ ಮತದಾನಕ್ಕೆ ಸಂಬಂಧಪಟ್ಟಂತೆ 270 ಮಂದಿಯ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ ಎಲ್ಲಾ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಾಧ್ಯವಾಗಲಿಲ್ಲ.
ಕೊನೆಗೆ ದಾವೆಯನ್ನು ಹಿಂದಕ್ಕೆ ಪಡೆಯಲು ಕೆ. ಸುರೇಂದ್ರನ್ ತೀರ್ಮಾನಿಸಿದ್ದು, ಇಂದು ಅಂತಿಮ ತೀರ್ಪು ಹೊರಬೀಳುವುದರೊಂದಿಗೆ ಕಳೆದ ಎರಡೂವರೆ ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಪ್ರಕರಣಕ್ಕೆ ಅಂತ್ಯ ಸಿಕ್ಕಿದೆ.