ಪುತ್ತೂರು, ಜೂ 21 (Daijiworld News/SM): ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ನಡೆಸುತ್ತಿವೆ. ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ತುಂಬಿ ತುಳುಕುತ್ತಿದೆ. ಇದನ್ನೆಲ್ಲಾ ಮರೆಮಾಚಲು ಇದೀಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜನರ ಅನುಕಂಪಗಳಿಸಲು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಎರಡೂ ಪಕ್ಷಗಳೂ ಅಪವಿತ್ರ ಮೈತ್ರಿಯ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಅತೀ ಹೆಚ್ಚು ಸ್ಥಾನಗಳನ್ನು ನೀಡಿ ಸರಕಾರ ನಡೆಸಲು ಅವಕಾಶವನ್ನು ನೀಡಿದ್ದರು. ಆದರೆ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷ ಒಟ್ಟಾಗಿ ಅಧಿಕಾರ ಹಿಡಿದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದೆಲ್ಲವನ್ನೂ ಮರೆಮಾಚಲು ದೇವೇಗೌಡರು, ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ಹಲವು ರೀತಿಯ ಹೇಳಿಕೆಗಳನ್ನು ನೀಡಿ ಜನರ ಅನುಕಂಪವನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನಾದರೂ ಬಿಟ್ಟು ಅಭಿವೃದ್ಧಿಯ ಕಡೆಗೆ ಮುಖ್ಯಮಂತ್ರಿ ಹಾಗೂ ಆಡಳಿತ ಪಕ್ಷ ಗಮನ ಹರಿಸಬೇಕಿದೆ ಎಂದರು. ಎರಡೂ ಪಕ್ಷಗಳ ಕುರ್ಚಿಯ ಆಸೆಯಿಂದಾಗಿ ರಾಜ್ಯದ ಜನ ಸಂಕಷ್ಟಪಡುವಂತಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಮಧ್ಯಂತರ ಚುನಾವಣೆ ನಡೆದಲ್ಲಿ, ಅದನ್ನು ಎದುರಿಸಲು ಬಿಜೆಪಿ ಸಿದ್ಧವಿದೆ. ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಲೂ ಕೂಡ ಬಿಜೆಪಿ ಸಿದ್ದವಾಗಿದೆ ಎಂದು ಅವರು ತಿಳಿಸಿದ್ದಾರೆ.