ಉಳ್ಳಾಲ, ಜೂ 21 (Daijiworld News/SM): ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಚಾವಡಿ ಬಳಿ ನೂತನವಾಗಿ ಆರಂಭಿಸಲಾದ ಮದ್ಯದಂಗಡಿಯನ್ನು ಕೂಡಲೇ ಬಂದ್ ಮಾಡುವಂತೆ ಆಗ್ರಹಿಸಿ ಹರೇಕಳ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ನಾಗರಿಕ ಸಮಿತಿಯ ಝಾಹಿದ್ ಮಲಾರ್, ಗ್ರಾಮಚಾವಡಿ ಪ್ರದೇಶವು ಮೂರು ಗ್ರಾಮ, ಎರಡು ತಾಲೂಕುಗಳನ್ನು ಸಂಪರ್ಕಿಸುವ ಪ್ರದೇಶವಾಗಿದೆ. ಇಲ್ಲಿಯ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಮದ್ಯದಂಗಡಿ ಆರಂಭಗೊಂಡಿರುವ ಕಟ್ಟಡದಲ್ಲಿ ಶಿಕ್ಷಣ ಸಂಸ್ಥೆಯೂ ಇದೆ. ಅಬಕಾರಿ ಇಲಾಖೆಯ ಷಡ್ಯಂತ್ರದೊಂದಿಗೆ ಇಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಲಾಗಿದ್ದು, ಕೂಡಲೇ ಮದ್ಯದಂಗಡಿಯನ್ನು ಬಂದ್ ಗೊಳಿಸದಿದ್ದರೆ ನಾವೇ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇನ್ನು ರಫೀಕ್ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತಿಯ ಪರವಾನಿಗೆಯನ್ನು ಪಡೆಯದೇ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿ ತೆರೆಯಲಾಗಿದೆ. ಇದರ ಪಕ್ಕದಲ್ಲೇ ಶಾಲೆ, ಮಹಿಳಾ ಹೊಲಿಗೆ ತರಬೇತಿ ಕೇಂದ್ರ, ಧಾರ್ಮಿಕ ಕೇಂದ್ರಗಳು ಹಾಗೂ ಜನವಸತಿ ಪ್ರದೇಶ ಇರುವುದರಿಂದ ಮುಂದೆ ಬಹಳಷ್ಟು ಸಮಸ್ಯೆಗಳು ಉದ್ಬವಿಸಲಿವೆ ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿವೆ ಎಂದರು.
ಬಳಿಕ ಸಮಿತಿಯ ಸದಸ್ಯರು ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದರೂ ಒಂದು ಹಂತದಲ್ಲಿ ಆಕ್ರೋಶಿತ ನಾಗರಿಕರು ಮದ್ಯದಂಗಡಿಗೆ ಮುತ್ತಿಗೆ ಹಾಕಿ ಬೀಗ ಹಾಕಿದರು.