ಬೆಂಗಳೂರು, ಜೂ 21 (Daijiworld News/SM): ಈ ಬಾರಿ ಮಳೆರಾಯ ಮುನಿಸಿಕೊಂಡಿದ್ದಾನೆ. ಜುಲೈ ತಿಂಗಳು ಹತ್ತಿರವಾಗುತ್ತಿದ್ದರೂ, ಸಮರ್ಪಕ ಮಳೆ ಮಾತ್ರ ಇನ್ನೂ ಬರದೇ ಇರುವುದು ರೈತರನ್ನು ಕಂಗಾಲಾಗಿಸಿದೆ. ಕೃಷಿ ಕಾರ್ಯಗಳು ಆರಂಭಿಸಲಾರದೆ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಮುಂದಿನ ಐದು ದಿನಗಳ ಕಾಲ ಕರಾವಳಿಯಲ್ಲಿ ಮಳೆ ರಾಯ ಅಬ್ಬರಿಸಲಿದ್ದಾನೆ ಎಂದು ತಿಳಿದು ಬಂದಿದೆ.
ಮುಂದಿನ ಐದು ದಿನಗಳಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಆರ್ಭಟ ಜೋರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಸುರಿದಿದೆ. ಮುಂದಿನ ಐದು ದಿನಗಳಲ್ಲಿ ಮಳೆ ಈ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಬೆಂಗಳೂರು ನಗರ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಐದು ದಿನಗಳ ಬಳಿಕ ಮತ್ತೆ ಮುಂಗಾರು ಕ್ಷೀಣಗೊಳ್ಳಲಿದೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಲಿದೆ. ಜೂನ್ 23ರಿಂದ 24ರವರೆಗೆ ಕರಾವಳಿಯಲ್ಲಿ ಅಲ್ಲಲ್ಲಿ ವಿಪರೀತ ಮಳೆಯಾಗಲಿದೆ ಎಂದು ತಿಳಿದು ಬಂದಿದೆ.