ಉಡುಪಿ, ಜೂ. 18 (DaijiworldNews/TA): ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಮಣಿಪಾಲವು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಸಿಗಬಹುದಾದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ 25 ವರ್ಷಗಳ ಸೇವೆಯನ್ನು ಗುರುತಿಸುವ ಮೂಲಕ ಮಣಿಪಾಲ ಆರೋಗ್ಯ ಕಾರ್ಡ್ 2025ರ ನೋಂದಣಿ ಪ್ರಾರಂಭಿಸಿರುವುದಾಗಿ ಘೋಷಿಸಿದೆ.

ನೋಂದಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಈ ಉಪಕ್ರಮದ ಮೂಲವನ್ನು ಪ್ರತಿಬಿಂಬಿಸುತ್ತಾ, ಗ್ರಾಮೀಣ ಭಾರತಕ್ಕೆ ಆರೋಗ್ಯ ಸೇವೆ ಮತ್ತು ಶಿಕ್ಷಣ ಲಭ್ಯವಾಗುವಂತೆ ಮಾಡುವ ಧೈಯವನ್ನು ಹೊಂದಿದ್ದ ಮಣಿಪಾಲ್ ಸಂಸ್ಥೆಯ ಸಂಸ್ಥಾಪಕ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ನಾಯಕತ್ವದ ಬಗ್ಗೆ ತಿಳಿಸಿದರು. ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಮಾರ್ಗದರ್ಶನದಲ್ಲಿ 2000 ರಲ್ಲಿ ಪ್ರಾರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯು ಈಗ ರಜತ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ.
25 ವರ್ಷಗಳಲ್ಲಿ, ಇದು ಕೋಟ್ಯಂತರ ಫಲಾನುಭವಿಗಳ ಜೀವನವನ್ನು ಮುಟ್ಟಿದೆ. ಮಣಿಪಾಲ ಆರೋಗ್ಯ ಕಾರ್ಡ್ನ 2025 ರ ಆವೃತ್ತಿಗೆ ದಾಖಲಾತಿಯನ್ನು ಪ್ರಾರಂಭಿಸುತ್ತಿದ್ದೆವೆ ಎಂದು ಬಹಳ ಹೆಮ್ಮೆಯಿಂದ, ಘೋಷಿಸುತ್ತೇನೆ ಎಂದು ಹೇಳಿದರು. ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಮಾತನಾಡಿ, ನಾವು ಒಂದು ವರ್ಷ ಮತ್ತು ಎರಡು ವರ್ಷಗಳ ಸದಸ್ಯತ್ವ ಆಯ್ಕೆಗಳನ್ನು ನೀಡುತ್ತಿದ್ದೇವೆ. ಬೆಲೆಯು ಸಮಾಜದ ಎಲ್ಲಾ ವರ್ಗಗಳಿಗೆ ಕೈಗೆಟುಕುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ಮಣಿಪಾಲ ಆರೋಗ್ಯ ಕಾರ್ಡಿನ ಮಹತ್ವದ ಬಗ್ಗೆ ತಿಳಿಸಿದರು.
ಮಾಹೆಯ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್ ಅವರು 2025ರ ಮೊದಲ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು ಅನಾವರಣಗೊಳಿಸಿ ಹಸ್ತಾಂತರಿಸಿದರು. ಮಣಿಪಾಲದ ಕೆಎಂಸಿ ಡೀನ್ ಡಾ. ಅನಿಲ್ ಕೆ ಭಟ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.