ಮಂಗಳೂರು, ಜೂ. 19 (DaijiworldNews/TA): ಮಳೆಗಾಲದಲ್ಲಿ ಸಂಭವಿಸುವ ಯಾವುದೇ ಹಾನಿ, ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ತಾಳಬಾರದು. ಪರಿಹಾರ ಧನ ವಿತರಣೆಗೆ ನೆಪ ಹೇಳಬಾರದು. ಅಪಾಯದ ಅಂಚಿನಲ್ಲಿರುವ ಹಳೆಯ ಸೇತುವೆಗಳಲ್ಲಿ ವಾಹನ ಸಂಚಾರಕ್ಕೆ ಯೋಗ್ಯವೇ ಎಂಬುದರ ಬಗ್ಗೆ ತಜ್ಞರ ವರದಿ ತಯಾರಿಸಬೇಕು. ಪರಿಹಾರ ಧನ ವಿತರಣೆಯಲ್ಲಿ ಯಾವ ಕಾರಣಕ್ಕೂ ವಿಳಂಬವಾಗಬಾರದು. ಹಾನಿ, ಅನಾಹುತಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರಿನ ಪಡೀಲ್ನಲ್ಲಿರುವ ದ.ಕ.ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಸಂಭವಿಸುವ ಅವಘಢಗಳಿಗೆ ತಕ್ಷಣ ಸ್ಪಂದಿಸಬೇಕು. ಕಳೆದ ಬಾರಿ ಎಲ್ಲೆಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಅನಾಹುತ ಸಂಭವಿಸಿದೆಯೋ ಅಲ್ಲೆಲ್ಲಾ ಮುಂಜಾಗ್ರತೆ ವಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಅದಕ್ಕಿಂತ ಮುಂಚೆಯೇ ಸೂಕ್ತ ಕ್ರಮ ಜರುಗಿಸಬೇಕು. ಜಿಲ್ಲಾ ಮತ್ತು ತಾಲೂಕು ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಸೇವೆಗೆ ಸಿಗುವಂತೆ ನೋಡಿಕೊಳ್ಳಬೇಕು.
ಕೆತ್ತಿಕ್ಕಲ್ ಸಹಿತ ಅಪಾಯಕಾರಿ ಭೂಪ್ರದೇಶ, ಗುಡ್ಡ ಪ್ರದೇಶಗಳ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸಚಿವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ.ಜಿಪಂ ಸಿಇಒ ಡಾ. ಆನಂದ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದ.ಕ.ಜಿಲ್ಲಾ ಎಸ್ಪಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.