ಕಾರ್ಕಳ, ಜೂ. 19 (DaijiworldNews/TA): ಪುರಸಭಾ ವ್ಯಾಪ್ತಿಯ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಅಲ್ಲಲ್ಲಿ ಹೊಂಡಗುಂಡಿಗಳೇ ಎದ್ದುಕಾಣುತ್ತಿದೆ. ಸಾರ್ವಜನಿಕರ ಓಡಾಟಕ್ಕೆ ತೊಡಕಾಗುತ್ತಿದೆ. ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಮೃತ್ ಯೋಜನೆಯ ಪೈಪ್ಲೈನ್ ಅಳವಡಿಕೆ ಕಾಮಗಾರಿಯಿಂದ ಈ ತೊಂದರೆಯಾಗಿದೆ ಎಂದು ಆರೋಪಿಸಿ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ಧರಣಿ ನಡೆಸಿದ ಘಟನಾವಳಿ ಕಾರ್ಕಳ ಪುರಸಭೆಯಲ್ಲಿ ನಡೆಯಿತು.





ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಶುಭದ ರಾವ್ ಮಾತನಾಡಿ, ಅನಂತಶಯನ ತೆಳ್ಳಾರು ರಸ್ತೆ, ಪೆರ್ವಾಜೆ ಎಲ್ಐಸಿ ರಸ್ತೆ, ಆನೆಕೆರೆ ರಸ್ತೆ ಸೇರಿದಂತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ಸದಸ್ಯರನ್ನು ಸೇರಿಸಿಕೊಂಡು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಆಡಳಿತ ಪಕ್ಷದ ಸದಸ್ಯ ಪ್ರದೀಪ್ ರಾಣೆ ಮಾತನಾಡಿ, ಕಳೆದ ನವೆಂಬರ್ ತಿಂಗಳಲ್ಲಿ ಆರಂಭವಾಗಬೇಕಾದ ಕಾಮಗಾರಿ ಮೇ ತಿಂಗಳಲ್ಲಿ ಆರಂಭಗೊಂಡಿದೆ. ಈ ವಿಳಂಬಕ್ಕೆ ಕಾರಣರಾರೆಂದು ಪ್ರಶ್ನಿಸಿದರು.
ಪ್ರತಿಪಕ್ಷದ ಧರಣಿ ನಡುವೆ ಆಗ್ರಹಿಸಿದ ಬೇಡಿಕೆಗೆ ಅಧ್ಯಕ್ಷರು ಉತ್ತರಿಸಬೇಕು. ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಕೊಡಿಸಬೇಕು. ಆಡಳಿತ ಪಕ್ಷದ ಸದಸ್ಯರಿಗೆ ಇದಕ್ಕೆ ಉತ್ತರಿಸುವ ಅಧಿಕಾರ ಇಲ್ಲ ಎಂದು ಶುಭದರಾವ್ ಆಕ್ಷೇಪಿಸಿದರು. ಸದಸ್ಯೆ ಶೋಭಾ ದೇವಾಡಿಗ ಮಾತನಾಡಿ, ಜನರ ಸಮಸ್ಯೆಯ ಬಗ್ಗೆ ಚರ್ಚಿಸಲು ಆಡಳಿತ ಮತ್ತು ಪ್ರತಿಪಕ್ಷ ಎಂಬ ಪ್ರತ್ಯೇಕತೆ ಇಲ್ಲ ಎಂದರು.
ಅವರೊಂದಿಗೆ ಸುಮಾ ಕೇಶವ್, ನೀತಾ ಆಚಾರ್ಯ, ಮಮತಾ, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ಪಲ್ಲವಿ ಮುಂತಾದವರು ಧ್ವನಿಗೂಡಿಸಿದರು. ಇದೇ ವಿಚಾರದಲ್ಲಿ ಮಾತಿನ ಚಕಾಮಕಿ ನಡೆದಿತ್ತು. ಪ್ರತಿಪಕ್ಷದ ಸದಸ್ಯರು ಧರಣಿ ಮೊಟಕುಗೊಳಿಸಿ ಸಭಾತ್ಯಾಗ ನಡೆಸಿದರು.
ಅಧ್ಯಕ್ಷ ಯೋಗೀಶ್ ದೇವಾಡಿಗ ಸದನವನ್ನು ಹದಿನೈದು ನಿಮಿಷಗಳ ಕಾಲ ಮುಂದೂಡಿದರು. ಬಳಿಕ ಆರಂಭಗೊಂಡ ಸಭೆಯಲ್ಲಿ ಜಲಮಂಡಳಿ ಅಧಿಕಾರಿ ರಿಕ್ಷಿತ್ ಅವರನ್ನು ಪ್ರತಿಪಕ್ಷದ ಸದಸ್ಯರುಗಳಾದ ಹರೀಶ್ ದೇವಾಡಿಗ, ಪ್ರತಿಮಾ ರಾಣೆ, ಶಿವಾಜಿ ರಾವ್ ಮತ್ತಿತರರು ತೀವ್ರ ತರಾಟೆಗೆ ತೆಗೆದುಕೊಂಡರು. ಅದಕ್ಕೆ ಉತ್ತರಿಸಿದ ಜಲಮಂಡಳಿ ಅಧಿಕಾರಿ ರಕ್ಷಿತ್ , ಮಳೆಗಾಲಕ್ಕೆ ವೆಟ್ಮಿಕ್ಸ್ ಮೂಲಕ ರಸ್ತೆಯನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಸರಿಪಡಿಸುತ್ತೇವೆ. ಮಳೆಗಾಲ ಮುಗಿದ ತಕ್ಷಣ ಕಾಂಕ್ರೀಟ್, ಡಾಮರೀಕರಣ ಅಥವಾ ಇಂಟರ್ಲಾಕ್ ಅಳವಡಿಕೆ ಕೆಲಸ ಮಾಡಿಕೊಡಲಿದ್ದೇವೆ. ಮೇಲಾಧಿಕಾರಿಗಳ ಒತ್ತಡ ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವ ಜವಾಬ್ದಾರಿ ಇದೆ ಎಂದರು. ಮೇಲಾಧಿಕಾರಿಗಳ ಒತ್ತಡ ಎಂಬ ಉತ್ತರಕ್ಕೂ ಆಡಳಿತ ಪಕ್ಷ ಅಸಮಾಧಾನ ವ್ಯಕ್ತಪಡಿಸಿತ್ತು.
ಮೂರುಮಾರ್ಗದಿಂದ ಸಾಲ್ಮರ್ ತನಕದ ಒಳಚರಂಡಿ ಕಾಮಗಾರಿ ಸಮರ್ಪಕವಾಗದೇ ಕುಡಿಯುವ ನೀರಿನ ಬಾವಿಗಳ ಕಲುಷಿತಗೊಂಡಿರುವ ಬೆಳವಣಿಗೆ ಮಾಸುವ ಮೊದಲೇ ನೀವಿಲ್ಲಿ ಹಾರಿಕೆ ಉತ್ತರ ಮೂಲಕ ಪುರಸಭಾ ಸದಸ್ಯರುಗಳನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸುತ್ತಿದ್ದೀರಿ. ಈ ಕಾಮಗಾರಿಯೂ ಅದೇ ರೀತಿಯಲ್ಲಿ ಆದರೆ ನಾಗರಿಕರಿಗೆ ನಾವು ಮುಖ ತೋರಿಸುವುದಾದರೂ ಹೇಗೆ ಎಂದು ಪ್ರತಿಪಕ್ಷ ಸದಸ್ಸರು ಜಲಮಂಡಳಿ ಅಧಿಕಾರಿ ರಕ್ಷಿತ್ ಅವರನ್ನು ತೀರಾ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆದಿತ್ತು.
ಬಸ್ಸು ಮಾಲಕನ ವಿರುದ್ಧ ದಂಡ ವಸೂಲಿಗೆ ಕ್ರಮ ಯಾಕಿಲ್ಲ?
ವಿವೇಕಾನಂದ ಶೆಣೈ ಮಾತನಾಡಿ, ಪ್ರತೀ ಶೌಚಾಲಯ ದುರಸ್ತಿಗೆ 60 ಸಾವಿರ ರೂ. ವ್ಯಯಿಸಲಾಗಿದೆ ಎಂದು ಆಕ್ಷೇಪಿಸಿದರು. ಸುಮಾ ಕೇಶವ್ ಮಾತನಾಡಿ, ಬಸ್ಸು ನಿಲ್ದಾಣದ ಬಳಿ ಹೈಮಾಸ್ಟ್ ದೀಪಕ್ಕೆ ಅಪಘಾತವೆಸಗಿದ ಬಸ್ಸು ಮಾಲಿಕರಿಗೆ ನೋಟೀಸ್ ಜಾರಿ ಮಾಡಿ ದಂಡ ವಸೂಲಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಾಲ್ಮರ ಮಸೀದಿ ಬಳಿ ಅಪಘಾತಗಳಾಗುತ್ತಿದ್ದು, ಅದಕ್ಕೆ ಸಿ.ಸಿ. ಅಳವಡಿಸುವಂತೆ ಒತ್ತಾಯಿಸಿದರು. ನಳಿನಿ ಆಚಾರ್ಯ ಮಾತನಾಡಿ, ಕಾಬೆಟ್ಟು ಪಾರ್ಕ್ಗೆ ವ್ಯಾಯಾಮದ ಸಲಕರಣೆಗಳನ್ನು ಒದಗಿಸುವಂತೆ ಬೇಡಿಕೆ ಸಲ್ಲಿಸಿದರು. ಹರೀಶ್ ದೇವಾಡಿಗ, ರೆಹಮತ್ ಎನ್.ಶೇಖ್, ಸೋಮನಾಥ ನಾಯ್ಕ್, ಅಶ್ಪಕ್ ಅಹ್ಮದ್, ಪ್ರತಿಮಾ ರಾಣೆ ಮುಂತಾದವರು ಅಮೃತಯೋಜನೆಯಡಿ ತಮ್ಮ ವಾರ್ಡುಗಳಿಗಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಪುರಸಭೆ ಅಧ್ಯಕ್ಷೆ ಯೋಗೀಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಪುರಸಭೆಯ ಮ್ಯಾನೇಜರ್ ಉದಯ ಕುಮಾರ್ ಉಪಸ್ಥಿತರಿದ್ದರು.