ಉಡುಪಿ, ಜೂ. 19 (DaijiworldNews/TA): ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಶಾಲಾ ವಾಹನಗಳ ಮೇಲೆ ನಿಗಾ ಇಡಲು ಉಡುಪಿ ಎಸ್ ಪಿ ಆಯಾ ವ್ಯಾಪ್ತಿಯ ಠಾಣಾಧಿಕಾರಿಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಗುರುವಾರ ಬೆಳಗ್ಗೆ ಶಾಲೆಗಳ ಮುಂದೆ ಕಾರ್ಯಾಚರಣೆಗಿಳಿದಿದ್ದಾರೆ.






ನಗರದ ಪ್ರಮುಖ ಜಂಕ್ಷನ್, ಶಾಲೆಯ ಮುಂಭಾಗದಲ್ಲಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಬರುವ ಆಟೋರಿಕ್ಷಾ, ಖಾಸಗಿ ವಾಹನ, ಸ್ಕೂಲ್ ಬಸ್, ದ್ವಿಚಕ್ರ ವಾಹನಗಳನ್ನು ಪರಿಶೀಲನೆ ನಡೆಸಿದರು. ನಿಯಮಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿದ್ದು ಕಂಡು ಬಂದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಬರುವ ದ್ವಿಚಕ್ರ ವಾಹನ ಸವಾರರಿಗೂ ಸೂಚನೆ ನೀಡುತ್ತಿದ್ದಾರೆ.
ಬಸ್ ಗಳು, ಆಟೋ ರಿಕ್ಷಾ ಮತ್ತು ಇತರ ವಾಹನಗಳು ಸೇರಿದಂತೆ ಮಕ್ಕಳನ್ನು ಶಾಲೆಗೆ ಸಾಗಿಸುವ ಎಲ್ಲಾ ವಾಹನಗಳನ್ನು ಪರಿಶೀಲಿಸಲು ಜಿಲ್ಲೆಯಲ್ಲಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಮದ್ಯಪಾನಗೈದು ವಾಹನ ಚಲಾಯಿಸುವುದು, ಫಿಟ್ನೆಸ್ ಪ್ರಮಾಣಪತ್ರದ ಪರಿಶೀಲನೆ, ಓವರ್ ಲೋಡ್ ಇತ್ಯಾದಿ ನಿಯಮ ಉಲ್ಲಂಘನೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಎಸ್ ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.