ಮಂಗಳೂರು, ಜೂ. 19 (DaijiworldNews/TA): ಯಕ್ಷನಂದನ’ 44ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ ಜೂ.21 ರಂದು ಸಂಜೆ 5.30 ರಿಂದ 9 ಗಂಟೆಯವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡದ ಸಂಚಾಲಕ ಪಿ. ಸಂತೋಷ್ ಐತಾಳ ಅವರು ಮಾತನಾಡಿ, ಯಕ್ಷಗಾನ ಪ್ರದರ್ಶನಕ್ಕೂ ಮುನ್ನ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಆಶೀರ್ವಚನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಹರಿಕೃಷ್ಣ ಪುನರೂರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ.
ಅನೇಕ ಬಾಲ-ಬಾಲಿಕಾ ಕಲಾವಿದರು ಯಕ್ಷನಂದನ ಬಳಗದಲ್ಲಿ ಯಕ್ಷಗಾನವನ್ನು ಮುಂದಿನ ತಲೆಮಾರಿಗೂ ವರ್ಗಾಯಿಸುವ ಕಾರ್ಯವನ್ನು ಮಾಡಿದ್ದಾರೆ. ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರಸಂಗವನ್ನು ಪಿ. ಸುರೇಶ್ ಕುಮಾರ್ ಐತಾಳ್ ಅವರು ಬರೆದಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯಕರಾಗಿ ನಿಂತು ಉದ್ಯೋಗಾವಕಾಶ ಕಲ್ಪಿಸಿಕೊಟ ಪಿ.ವಿ. ಐತಾಳರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ಹುಟ್ಟು ಹಾಕಿದ ಪಿ.ವಿ. ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರೀಟೇಬಲ್ ಟ್ರಸ್ಟಿನ ವತಿಯಿಂದ ಕೊಡಲ್ಪಡುವ ವಿದ್ಯಾನಿಧಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.