ಕಾಸರಗೋಡು, ಜೂ. 19 (DaijiworldNews/AA): ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಶ್ರಮಿಸುತ್ತಿದೆ. ಕನ್ನಡಿಗರ ಭಾವನೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದೆ. ಜಿಲ್ಲೆಯ ನಾನಾ ಕಡೆ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಶ್ರೀಘ್ರದಲ್ಲೇ ಕರ್ನಾಟಕ ಮುಖ್ಯಮಂತ್ರಿಗಳು ಬದಿಯಡ್ಕದ ಡಾ.ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು.








ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿ ನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಯ್ಯಾರ್ 16ನೇ ವಾರ್ಡ್ ಕಯ್ಯಾರ್ ಕುಟುಂಬ ಶ್ರೀ ಘಟಕಗಳ ಸಹಯೋಗದಲ್ಲಿ ಬುಧವಾರ ಕಯ್ಯಾರ್ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಗಳ 110ನೇ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಸರಗೋಡಿನ ವಿಲೀನಕ್ಕಾಗಿ ಜೀವಮಾನವಿಡೀ ಹೋರಾಟ ನಡೆಸಿದ ಕಯ್ಯಾರರ ಕೃತಿಗಳು ಮಾಯವಾಗುವ ಆತಂಕ ಎದುರಾಗಿದೆ. ಅವರ ಕುಟುಂಬ, ಕವಿತಾ ಕುಟೀರ ಮತ್ತು ಅಭಿಮಾನಿ ಬಳಗ ಸಹಕರಿಸಿದರೆ ಪ್ರಾಧಿಕಾರ ಕಯ್ಯಾರರ ಎಲ್ಲಾ ಕೃತಿಗಳ ಮರು ಪ್ರಕಟಣೆಗೆ ಮುಂದಾಗಲಿದೆ. ಪ್ರಾಧಿಕಾರದ ಅಧ್ಯಕ್ಷನಾದ ಬಳಿಕ 9 ಬಾರಿ ಕಾಸರಗೋಡಿಗೆ ಬಂದು ಇಲ್ಲಿನ ಜನರ ಭಾವನೆಗಳನ್ನು ಅರಿತಿದ್ದೇನೆ. ಇಲ್ಲಿನ ಕನ್ನಡಿಗರಿಗೂ ನಾವು ಕರ್ನಾಟಕದಲ್ಲಿದ್ದೇವೆ ಎಂಬ ಭಾವನೆ ಬರುತ್ತಿದೆ. ಪ್ರಾಧಿಕಾರದ ಸದಸ್ಯ ಸುಬ್ಬಯಕಟ್ಟೆಯವರು ಇಲ್ಲಿನ ಪ್ರತಿಯೊಂದು ಸಮಸ್ಯೆಯನ್ನು ಪ್ರಾಧಿಕಾರದ ಗಮನಕ್ಕೆ ತರುತ್ತಿದ್ದಾರೆ. ಕನ್ನಡದ ಅವಗಣನೆ ಸಹಿತ ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಗೋವಾದಲ್ಲೂ ಕನ್ನಡ ಭವನ ನಿರ್ಮಿಸಲು ಖಾಸಗಿ ಜಮೀನನ್ನು ಖರೀದಿಸಲಾಗಿದೆ. ಹೊರ ರಾಜ್ಯಗಳಲ್ಲಿ ಕಲಿತ ಮಕ್ಕಳಿಗೂ ಕರ್ನಾಟಕದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ಪ್ರಾಧಿಕಾರ ಮಾಡಿದೆ ಎಂದು ಹೇಳಿದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಚೆಂಡೆ ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವಿ ಕಯ್ಯಾರರು ಕನ್ನಡ ನಾಡು ನುಡಿ ಸಂಸ್ಕೃತಿಯ ಬದ್ಧತೆಯೊಂದಿಗೆ ಕವಿಯಾಗಿ ಹೋರಾಟಗಾರರಾಗಿ ಮಾನವೀಯತೆ ಸಂದೇಶ ಸಾರಿದ್ದಾರೆ. ಮೇರು ವ್ಯಕ್ತಿತ್ವದ ಕವಿ ಕಯ್ಯಾರರು ಮತ್ತು ಗೋವಿಂದ ಪೈಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಾಸರಗೋಡಿನ ಕನ್ನಡದ ನೆಲ ಕೇರಳದ ಪಾಲಾದಾಗ ಕವಿ ಕಯ್ಯಾರ ಕಿಞ್ಞಣ್ಣ ರೈಗಳು "ಬೆಂಕಿ ಬಿದ್ದಿದೆ ಮನೆಗೆ ಓ...ಬೇಗ ಬನ್ನಿ ಎಂದು ಕನ್ನಡಿಗರಿಗೆ ಕರೆ ಕೊಟ್ಟಿದ್ದರು. ಕೇರಳ ಸರಕಾರವು ಆರೋಗ್ಯ, ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕಾಸರಗೋಡನ್ನು ನಿರ್ಲಕ್ಷಿಸಿದಾಗ ಕಯ್ಯಾರರ ಈ ಸಾಲನ್ನು ವಿಧಾನ ಸಭೆ ಅಧಿವೇಶನದಲ್ಲಿ ಉಲ್ಲೇಖಿಸಿದ್ದೆ ಎಂದು ನೆನಪಿಸಿಕೊಂಡರು.
ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಕ, ಜಾನಪದ ವಿದ್ವಾಂಸ, ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ.ಎ.ಶ್ರೀನಾಥ್ ಅವರಿಗೆ "ಕಯ್ಯಾರ" ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು. ಕೊಂಕಣಿ ಗಾಯಕ, ದುಬೈನ ಸಾಹಿತ್ಯ ಸಂಘಟಕ ಜೋಸಫ್ ಮಾಥಿಯಾಸ್ ಅವರನ್ನು ಗೌರವಿಸಲಾಯಿತು.
ಕಲ್ಕೂರ ಫೌಂಡೇಶನ್ ಮಂಗಳೂರು ಅಧ್ಯಕ್ಷ, ಗ.ಸಾ.ಸಾ.ಅಕಾಡೆಮಿ ಕಾಸರಗೋಡು ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಧರ್ಮಗ್ರಂಥಗಳು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಒಳ್ಳೆಯ ಚಿಂತನೆಗಳನ್ನು ಸ್ವೀಕರಿಸಬೇಕು. ಮಾತೃ ಸಂಸ್ಕೃತಿ ಉಳಿಯಲು ಮಾತೃ ಸಮಾಜ ಜಾಗೃತವಾಗಬೇಕು. ಪುಸ್ತಕ ಓದುವ ಜತೆಗೆ ಸಂವಹನ, ಚಿಂತನೆಗಳು ಕನ್ನಡವಾಗಿರಬೇಕು ಅಭಿಪ್ರಾಯಪಟ್ಟರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಯ್ಯಾರರು ಸ್ವಾತಂತ್ರ್ಯ ಹೋರಾಟಗಾರರಾಗಿ, ಬಹು ಭಾಷಾ ವಿಧ್ವಾಂಸರಾಗಿ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಕಾಸರಗೋಡಿನಲ್ಲಿ ಕನ್ನಡಕ್ಕೂ ಪ್ರಾಧಾನ್ಯ ನೀಡಲು ಜಿಲ್ಲಾಧಿಕಾರಿಗೆ ಪ್ರಾಧಿಕಾರ ಇಂದೇ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.
ಬಹುಭಾಷಾ ಕವಿ, ಸಾಹಿತಿ ಮೊಹಮ್ಮದ್ ಬಡ್ಡೂರು ಸಂಸ್ಮರಣಾ ಭಾಷಣದಲ್ಲಿ ಮಾತನಾಡಿ, ಕಯ್ಯಾರರು ಪ್ರಾಸಗಳನ್ನು ಜೋಡಿಸುವ ಚಮತ್ಕಾರ ಅದ್ಭುತ. ಕಾವ್ಯ ಲೋಕದಲ್ಲಿ ತಪಸ್ಸು ಮಾಡಿ ಪಳಗಿದ ಅವರು ಸವ್ಯಸಾಚಿ ಎಂದರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಕಾರ್ಯದರ್ಶಿ ಮಂಜುನಾಥ ಆಳ್ವ ಮಡ್ವ ಮಾತನಾಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಶಿವರಡ್ಡಿ ಖ್ಯಾಡೇದ್, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ತೊಟ್ಟೆತ್ತೋಡಿ, ಪೈವಳಿಕೆ ಗ್ರಾಪಂ ಅಧ್ಯಕ್ಷೆ ಜಯಂತಿ, ಮಂಜೇಶ್ವರ ಬ್ಲಾಕ್ ಪಂ.ಸದಸ್ಯೆ ಫಾತಿಮತ್ ಝೌರ ಉಪಸ್ಥಿತರಿದ್ದರು.
ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಪ್ರಾರ್ಥನೆ ಹಾಡಿದರು. ಗ.ಸಾ.ಸಾ.ಅಕಾಡೆಮಿ ಕಾಸರಗೋಡು ಅಧ್ಯಕ್ಷ ಚನಿಯಪ್ಪನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ನಿರೂಪಿಸಿದರು.