ಉಡುಪಿ, ಜೂ. 19 (DaijiworldNews/AA): "ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಉಡುಪಿಯ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರು ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಜೂನ್ 19 ರಂದು ಡಿಸಿ ಕಚೇರಿಯಲ್ಲಿ ನಡೆದ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ತಮ್ಮನ್ನು ಪರಿಚಯಿಸಿಕೊಂಡ ಡಿಸಿ ಸ್ವರೂಪ ಟಿ ಕೆ ಅವರು, ತಮ್ಮ ಹಿನ್ನೆಲೆ ಮತ್ತು ಜಿಲ್ಲಾಡಳಿತದ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. "ನಾನು 2012ರ ಬ್ಯಾಚ್ನ ಅಧಿಕಾರಿ. ನಾನು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ಐಐಟಿ ದೆಹಲಿಯಿಂದ ಟೆಕ್ಸ್ ಟೈಲ್ ಇಂಜಿನಿಯರಿಂಗ್ನಲ್ಲಿ ಎಂ.ಟೆಕ್ ಪೂರ್ಣಗೊಳಿಸಿದ್ದೇನೆ. ಇತರೆ ಇಲಾಖೆಗಳಿಂದ 2% ಆಯ್ಕೆ ಕೋಟಾದ ಮೂಲಕ ಐಎಎಸ್ಗೆ ಸೇರಿದ್ದೇನೆ" ಎಂದು ಅವರು ಹೇಳಿದರು.
ಉಡುಪಿಯಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ಕೈಗಾರಿಕಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. "ಜಿಲ್ಲಾಧಿಕಾರಿ ಪಾತ್ರವು ಸಾಕಷ್ಟು ಸವಾಲಿನಿಂದ ಕೂಡಿದೆ, ಆದರೆ ನನ್ನ ಅನುಭವ ಮತ್ತು ಮಾಧ್ಯಮ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡುತ್ತೇನೆ ಎಂಬ ವಿಶ್ವಾಸವಿದೆ" ಎಂದರು.
"ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಪ್ರಸ್ತುತ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಕಾನೂನು ಪ್ರಕಾರ ನಾನು ಕಾರ್ಯನಿರ್ವಹಿಸುತ್ತೇನೆ. ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ನಾನು ಸಿದ್ಧಳಿದ್ದೇನೆ ಮತ್ತು ರಾಜ್ಯದ ಪ್ರತಿಯೊಂದು ಸ್ಥಳಕ್ಕೂ ಭೇಟಿ ನೀಡಲು ಬಯಸುತ್ತೇನೆ" ಎಂದು ತಿಳಿಸಿದರು.
ಡಿಸಿ ಸ್ವರೂಪ ಟಿ ಕೆ ಅವರು ತಮ್ಮ ಹಿಂದಿನ ಅಧಿಕಾರಿ ಡಾ. ವಿದ್ಯಾಕುಮಾರಿ ಅವರಿಂದ ಪಡೆದ ಮಾರ್ಗದರ್ಶನವನ್ನು ಸಹ ಉಲ್ಲೇಖಿಸಿದರು. "ಈಗಾಗಲೇ ಪ್ರಾರಂಭಿಸಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗುವುದು. ಮಳೆ ಸಂಬಂಧಿತ ರಜಾದಿನಗಳ ಕುರಿತು ಸಾರ್ವಜನಿಕರಿಂದ ತಮಗೆ ಸಂದೇಶಗಳು ಬರುತ್ತಿದೆ. ನನಗೆ ಉಡುಪಿಯಲ್ಲಿ ಪೋಸ್ಟಿಂಗ್ ಸಿಕ್ಕ ತಕ್ಷಣ, ಭಾರೀ ಮಳೆಯಿಂದಾಗಿ ರಜೆ ಘೋಷಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಬರುತ್ತಿದ್ದವು. ನಾನು ವೈಯಕ್ತಿಕವಾಗಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಆರೋಗ್ಯ ಇಲಾಖೆಯು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ" ಎಂದು ಹೇಳಿದರು.
"ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದ ಸಿಎಸ್ಆರ್ ಚಟುವಟಿಕೆಗಳನ್ನು ಕೈಗೊಳ್ಳಲು ಹಲವಾರು ಖಾಸಗಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಈ ಪ್ರದೇಶವು ಸೂಕ್ಷ್ಮ ಪರಿಸರ ವಲಯವಾಗಿದೆ, ಮತ್ತು ಇಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಇತರ ಸ್ಥಳಗಳಂತೆ ಮುಕ್ತವಾಗಿ ಕೈಗೊಳ್ಳಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.
"ಸಾರ್ವಜನಿಕ ಸೇವೆಗಳಲ್ಲಿನ ವೈಫಲ್ಯಗಳನ್ನು ತೋರಿಸುವ ವೀಡಿಯೊಗಳು ವೈರಲ್ ಆಗುವುದಾದರೆ, ಅದು ನಮಗೆ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ" ಎಂದರು.
ಜಿಲ್ಲೆಯಲ್ಲಿ ಪಾರದರ್ಶಕ ಮತ್ತು ದಕ್ಷ ಆಡಳಿತ ನೀಡಲು ಡಿಸಿ ಸ್ವರೂಪ ಟಿ ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.