ಬಂಟ್ವಾಳ , ಜೂ. 19 (DaijiworldNews/AK):ಎಲ್ಲದಕ್ಕೂ ದುಪ್ಪಟ್ಟು ತೆರಿಗೆ ವಿಧಿಸುತ್ತಿರುವ ರಾಜ್ಯದ ಕಾಂಗ್ರೇಸ್ ಸರ್ಕಾರ , ಗ್ಯಾರಂಟಿ ಯೋಜನಗೆಳ ಹೆಸರಿನಲ್ಲಿ ವಂಚಿಸುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಆರೋಪಿಸಿದ್ದಾರೆ.

ಬಂಟ್ವಾಳದ ಸ್ಪರ್ಶಕಲಾಮಂದಿರದಲ್ಲಿ ಗುರುವಾರ ನಡೆದ ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಜೂನ್ 23 ರಂದು ರಾಜ್ಯ ಸರಕಾರದ ವಿರುದ್ಧ ಪ್ರತಿ ಪಂಚಾಯಿತಿಯಲ್ಲಿ ಹೋರಾಟ ನಡೆಯಲಿದೆ. ಹೋರಾಟ ಬಿಜೆಪಿಗೆ ಏನು ಹೊಸದಲ್ಲ, ಹೋರಾಟದಿಂದಲೇ ಪಕ್ಷವನ್ನು ಸಂಘಟಿಸಿದ ಬಿಜೆಪಿಗೆ ಮತ್ತೆ ಹೋರಾಟ ಅನಿವಾರ್ಯವಾಗಿದೆ. ಪಕ್ಷದ ಕಾರ್ಯಕರ್ತರು ಕ್ರಿಯಾಶೀಲರಾಗಿ ಸರಕಾರಕ್ಕೆ ಬಿಸಿಮುಟ್ಟಿಸುವ ಹೋರಾಟದಲ್ಲಿ ಜೊತೆಯಾಗಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ಸರಕಾರ ಇದಯೇ ಎಂಬುದು ಗೊತ್ತಾಗುತ್ತಿಲ್ಲ. ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸಗಳನ್ನು ಕಾರ್ಯಕರ್ತರು ಮಾಡಬೇಕು, ನಮ್ಮ ಜಿಲ್ಲೆಯಲ್ಲಿ ಸುಮಾರು ಐವತ್ತು ಸಾವಿರದಷ್ಟು ಮಂದಿ ರಾಜ್ಯಸರಕಾರದ ಸೌಲಭ್ಯ ಕಡಿತದಿಂದ ವಂಚಿತರಾಗುತ್ತಿದ್ದಾರೆ. ಪಕ್ಷ ಅವರೊಂದಿಗೆ ನಿಲ್ಲಬೇಕು. ಪ್ರತಿಯೊಬ್ಬರೂ ಹೋರಾಟದಲ್ಲಿ ಭಾಗವಹಿಸಬೇಕು ಎನ್ನುವ ಸೂಚನೆ ಇದ್ದು, ಪಕ್ಷ ನೀಡಿದ ಸೂಚನೆಯಂತೆ ರಾಯಿ ಗ್ರಾಮದಲ್ಲಿ ಹೋರಾಟಕ್ಕೆ ಕುಳಿತುಕೊಳ್ಳುವೆ ಎಂದರು. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ನೀಡಿದ ಜವಬ್ದಾರಿ ಹಾಗೂ ಸೂಚನೆಯನ್ನು ಪಾಲಿಸುತ್ತೇನೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ವಸೂಲಿಬಾಜಿ ಸರಕಾರವಿದ್ದು, ಬಂಟ್ವಾಳ ಕ್ಷೇತ್ರದಲ್ಲಿ 7743 ಮಂದಿಗೆ ಪಿಂಚಣಿ ಯೋಜನೆಯ ರದ್ದತಿಗೆ ನೋಟೀಸ್ ಜಾರಿಮಾಡಲಾಗಿದೆ, ಜನರ ಹಿತ ಮರೆತು ಮಲಗಿರುವ ಸರಕಾರವನ್ನು ಎಬ್ಬಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು. ಸ್ಥಳೀಯವಾಗಿ ಜನರೊಂದಿಗೆ ಬೆರೆತು ವಿಶ್ವಾಸಗಳಿಸಿಕೊಂಡು ಕೆಲಸ ಮಾಡಿದರೆ ಮಾತ್ರ ಪಕ್ಷದ ಜೊತೆ ಕಾರ್ಯಕರ್ತ ನಾಯಕನಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ಅಭಿಯಾನದ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ರಾಕೇಶ್ ರೈ ಕಡೆಂಜಿ, ರೂಪಾ. ನಿತೇಶ್ ಶಾಂತಿವನ, ಮೋಹನ್ ಪಿ ಎಸ್, ವಿಜಯ ರೈ, ವಸಂತ ಅಣ್ಣಳಿಕೆ, ಬಾಲಕೃಷ್ಣ ಸೆರ್ಕಳ, ಪ್ರಭಾಕರ ಪ್ರಭು ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಸ್ವಾಗತಿಸಿದರು. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ನಾಗೇಶ್ ಮಧ್ವ ಕಾರ್ಯಕ್ರಮ ನಿರ್ವಹಿಸಿದರು.