ಉಳ್ಳಾಲ, ಜೂ. 20 (DaijiworldNews/AA): ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಅಪಾಯದಲ್ಲಿರುವ ಮರಗಳ ರೆಂಬೆಯನ್ನು ತೆಗೆಯಲು ಸೋಮೇಶ್ವರ ಪುರಸಭೆ ಸಲ್ಲಿಸಿದ ಪಟ್ಟಿಯಲ್ಲಿಲ್ಲದ ಸೋಮೇಶ್ವರ ಕಡಲ ತೀರ ಬದಿಯಲ್ಲಿದ್ದ ಬೆಲೆ ಬಾಳುವ ಗಾಳಿ ಮರಗಳನ್ನು ಅರಣ್ಯ ಇಲಾಖೆ ಕಡಿದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಲ ತೀರದಲ್ಲಿ ಅಪಾಯದಲ್ಲಿದ್ದ ಎರಡು ಗಾಳಿ ಮರ ಸೇರಿದಂತೆ ಉಚ್ಚಿಲ ಭಗವತಿ ಶಾಲೆ, ಪುರಸಭೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾದ ಮರಗಳ ಪಟ್ಟಿ ಮಾಡಿ ರೆಂಬೆ ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಆದರೆ ಅರಣ್ಯ ಇಲಾಖೆ ಅದರ ಬದಲಾಗಿ ಕಡಲ ತೀರದ ಐದು ಗಾಳಿ ಮರಗಳನ್ನು ಬುಡ ಸಮೇತ ಕಡಿದು, ಸಾಗಿಸಿದೆ ಎಂದು ಆರೋಪಿಸಲಾಗಿದೆ. ಇದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವು ಸಂಶಯಕ್ಕೆ ಕಾರಣವಾಗಿದೆ.
ಈ ವಿಷಯದ ಕುರಿತು ಮಾತನಾಡಿರುವ ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಅವರು, "ನಮ್ಮ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳ ಪಟ್ಟಿಯನ್ನು ನಾವು ಅರಣ್ಯ ಇಲಾಖೆಗೆ ನೀಡಿದ್ದೇವೆ. ಪಟ್ಟಿಯಲ್ಲಿರುವ ಯಾವುದೇ ಮರಗಳನ್ನು ಇಲ್ಲಿಯವರೆಗೆ ತೆಗೆದುಹಾಕಲಾಗಿಲ್ಲ. ಬದಲಾಗಿ, ಕರಾವಳಿಯುದ್ದಕ್ಕೂ ಗಾಳಿ ಬೀಸುವ ಮರಗಳನ್ನು ಕಡಿದು ಪುರಸಭೆಗೆ ತಿಳಿಸದೆ ತೆಗೆದುಕೊಂಡು ಹೋಗಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯಿಂದ ಇಲಾಖೆಗೆ ಸ್ಪಷ್ಟನೆ ಕೋರಲಾಗುವುದು" ಎಂದು ತಿಳಿಸಿದ್ದಾರೆ.